ಲಂಡನ್: ಜುಲೈ 1ರಿಂದ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 5ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಆದರೆ, ರೋಹಿತ್ ಶರ್ಮಾ ಕೋವಿಡ್ ಸೋಂಕಿಗೊಳಗಾಗಿದ್ದು ನಾಯಕತ್ವ ಜವಾಬ್ದಾರಿ ಯಾರ ಹೆಗಲೇರಲಿದೆ ಎಂಬ ಕುತೂಹಲ ಕ್ರೀಡಾಭಿಮಾನಿಗಳದ್ದು. ಇದಕ್ಕೆ ಮುಂದಿನ ಕೆಲವು ಗಂಟೆಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದಾಗ ಮಾತ್ರ ಸರಣಿ ಭಾರತದ ಪಾಲಾಗಲಿದೆ. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಆದರೆ, ಅವರು ಟೆಸ್ಟ್ ಆರಂಭಗೊಳ್ಳುವುದರೊಳಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ತಂಡದ ನಾಯಕತ್ವವನ್ನು ಯಾರಿಗೆ ನೀಡಬೇಕು ಎಂಬುದು ಬಿಸಿಸಿಐಗೆ ಕೊಂಚ ತಲೆನೋವಿನ ಸಂಗತಿ.
28ರ ಹರೆಯದ ಬುಮ್ರಾ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದು, ನಾಯಕತ್ವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ಬುಮ್ರಾ 29 ಟೆಸ್ಟ್ ಪಂದ್ಯಗಳನ್ನಾಡಿದ್ದು, ನಾಯಕತ್ವ ಜವಾಬ್ದಾರಿಯ ಅನುಭವ ಹೊಂದಿಲ್ಲ. ಮತ್ತೊಂದೆಡೆ, ಭಾರತದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಉದಯೋನ್ಮುಖ ತಾರೆಯಾಗಿದ್ದು, ಭಾರತದ ಭವಿಷ್ಯದ ನಾಯಕ ಎಂದೇ ಬಿಂಬಿಸಲ್ಪಟ್ಟವರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಜಬಾಬ್ದಾರಿ ನಿರ್ವಹಿಸಿದ್ದು, ಸಾಕಷ್ಟು ಅನುಭವಿ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಭಾರತದ ನಾಯಕತ್ವ ವಹಿಸಿಕೊಂಡಿರುವ ಪಂತ್ಗೆ ಕ್ಯಾಪ್ಟನ್‌ಶಿಪ್ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ 2-1 ಅಂತರದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವ ಜವಾಬ್ದಾರಿ ಬಿಟ್ಟುಕೊಟ್ಟರು. ಇದೀಗ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಅವರು ಮತ್ತೊಮ್ಮೆ ತಂಡ ಮುನ್ನಡೆಸುವ ಸಂಭವವಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಈ ನಿಟ್ಟಿನಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸುವ ತವಕದಲ್ಲಿದೆ.