ಮೊಹಾಲಿ: ಶುಕ್ರವಾರದಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಆರಂಭವಾಗಲಿದೆ. ಇದು ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವಾಗಲಿದ್ದು, ಈ ಪಂದ್ಯವನ್ನು ಪ್ರೇಕ್ಷಕರ ಮುಂದೆ ಆಡಿಸಲು ಬಿಸಿಸಿಐ ಅನುಮತಿ ನೀಡಿದೆ. ಖಾಲಿ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸುವುದಾಗಿ ಪಂಜಾಬ್ ಕ್ರಿಕೆಟ್ ಮಂಡಳಿ ನಿರ್ಧರಿಸಿತ್ತು.
ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಟೆಸ್ಟ್ ಪಂದ್ಯವನ್ನು ಸ್ಟೇಡಿಯಂನ ಶೇ. 50 ರಷ್ಟು ಪ್ರೇಕ್ಷಕರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಖಚಿತಪಡಿಸಿದೆ.
"ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಖಾಲಿ ಮೈದಾನದಲ್ಲಿ ನಡೆಯುವುದಿಲ್ಲ. ಮೈದಾನಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಬೇಕೆ ಎನ್ನುವುದನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಲ್ಲಿನ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸುತ್ತದೆ. ನಾನು ಪಿಸಿಎ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು 100ನೇ ಟೆಸ್ಟ್ ಪಂದ್ಯವನ್ನಾಡುವ ವಿರಾಟ್ ಕೊಹ್ಲಿ ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ" ಎಂದು ಹೇಳಿಕೆಯಲ್ಲಿ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ಗಲ್ಲಿ ಕ್ರಿಕೆಟ್ to ರಣಜಿ ಟ್ರೋಫಿ.. ಗುಡಿಸಲಿನಲ್ಲಿ ಬೆಳೆದ ಹುಡುಗನ ಅದ್ಭುತ ಕ್ರಿಕೆಟ್ ಪಯಣ
ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ವೈಟ್-ಬಾಲ್ ಸರಣಿಯನ್ನು ಖಾಲಿ ಸ್ಟೇಡಿಯಂನಲ್ಲಿ ಆಡಲಾಗಿತ್ತು. ಆದರೆ ದೇಶಾದ್ಯಂತ ಕೋವಿಡ್ 19 ಪ್ರಕರಣಗಳ ಕುಸಿತವು ಆತಿಥ್ಯ ವಹಿಸುವ ಅಸೋಸಿಯೇಷನ್‌ಗಳಿಗೆ ಪ್ರೇಕ್ಷಕರನ್ನು ಅನುಮತಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದರು.
ರಾಜ್ಯದ ಆರೋಗ್ಯ ಅಧಿಕಾರಿಗಳ ಸಲಹೆಗಳನ್ನು ಆಧರಿಸಿ ಕೋಲ್ಕತ್ತಾ ಮತ್ತು ಧರ್ಮಶಾಲಾದಲ್ಲಿ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಯುಪಿಸಿಎ ಚುನಾವಣೆಯ ಕಾರಣದ ಲಖನೌದಲ್ಲಿ ಪ್ರೇಕ್ಷಕರಿಲ್ಲದೆ ಪಂದ್ಯವನ್ನು ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
"ನಾನು ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಮತ್ತು ನಮ್ಮ ಚಾಂಪಿಯನ್ ಕ್ರಿಕೆಟರ್ಗೆ ಶುಭ ಕೋರುತ್ತೇನೆ. ಇದು ನಮ್ಮ ಅಭಿಮಾನಿಗಳಿಗೆ ಸವಿಯುವ ಸಂದರ್ಭ. ವಿರಾಟ್ ಮುಂದಿನ ಹಲವು ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿ" ಎಂದು ಜಯ್ ಶಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಪಿಸಿಎ ಖಜಾಂಚಿ ಆರ್.ಪಿ.ಸಿಂಗ್ಲಾ, ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಟೇಡಿಯಂನ ಶೇ.50 ರಷ್ಟು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುವುದು. ನಾವು ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಇಷ್ಟು ಕಡಿಮೆ ಸಮಯದಲ್ಲಿ ಟಿಕೆಟ್ ಸಿದ್ಧಪಡಿಸುವುದರ ಪಿಸಿಎ ಕೇಳಿದ್ದಕ್ಕೆ, ನಾವು ಸದಾ ಸಿದ್ಧತೆಯಲ್ಲಿರುತ್ತೇವೆ. ನಾಳೆಯಿಂದ ಆನ್‌ಲೈನ್ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಕೊಹ್ಲಿ 100ನೇ ಟೆಸ್ಟ್: ತಂದೆ ಸಾವಿನ ದಿನದಂದೂ ವಿರಾಟ್ ಬದ್ಧತೆಯ ಆಟ ನೆನೆದ ಪಾರ್ಟ್ನರ್ ಪುನೀತ್ ಬಿಶ್ತ್