ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ತಂಡವು 209 ರನ್ಗಳಿಂದ ಹೀನಾಯ ಸೋಲು ಕಂಡಿದೆ. ಟೀಂ ಇಂಡಿಯಾ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಟೀಕೆ ಎದುರಾಗುತ್ತಿದೆ. ಸೋಲಿನ ಬಳಿಕ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಚೀನಾದ ತತ್ವಜ್ಞಾನಿ ಲಾವೊ ತ್ಸು ಅವರ ಉಲ್ಲೇಖವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಮೌನವೇ ಶಕ್ತಿಯ ಮೂಲ" (Silence is a source of great strength) ಎಂಬ ಪೋಸ್ಟ್ನ್ನು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ಇದು ಚೀನಾದ ತತ್ವಜ್ಞಾನಿ ಲಾವೊ ತ್ಸು ಅವರ ಹೆಸರನ್ನೂ ಸಹ ಕೆಳಭಾಗದಲ್ಲಿ ಹೊಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಳಪೆ ಹೊಡೆತಕ್ಕೆ ಯತ್ನಿಸಿದ ವಿರಾಟ್ 49 ರನ್ಗೆ ಔಟಾಗುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿತ್ತು. ಇದರಿಂದ ಟೀಮ್ ಇಂಡಿಯಾ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರಿಂದ ಟೀಕೆ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಈ ಪೋಸ್ಟ್ ಶೇರ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ 444 ರನ್‌ಗಳ ಬೃಹತ್ ಗುರಿ ಪಡೆದ ಭಾರತ ತಂಡಕ್ಕೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಅಜೇಯರಾಗಿದ್ದ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅಭಿಮಾನಿಗಳ ಪಾಲಿಗೆ ದೊಡ್ಡ ಭರವಸೆಯಾಗಿದ್ದರು. ಅಜಿಂಕ್ಯ ರಹಾನೆ ಜೊತೆ 5ನೇ ದಿನ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ, ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ಆಫ್-ಸ್ಟಂಪ್‌ನ ಹೊರಗಡೆ ಎಸೆದ ಬೌಲ್ನ್ನು ಡ್ರೈವ್ ಮಾಡಲು ಯತ್ನಿಸಿ ಕೈಸುಟ್ಟುಕೊಂಡಿದ್ದರು. 49 ರನ್ ಆಗಿದ್ದಾಗ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಕೂಡ ಶೂನ್ಯಕ್ಕೆ ಔಟಾಗುವ ಮೂಲಕ ಭಾರತ ತಂಡವು ಸೋಲಿನತ್ತ ಮುಖ ಮಾಡಿತ್ತು.
ವಿರಾಟ್ ಕೊಹ್ಲಿ ಇಂತಹ ತಾತ್ವಿಕ ಪೋಸ್ಟ್ ಹಾಕಿರುವುದು ಇದೇ ಮೊದಲಲ್ಲ. ನಾಲ್ಕನೇ ದಿನದಾಟದ ಅಂತ್ಯಕ್ಕೂ ಸಹ ಪೋಸ್ಟ್ವೊಂದನ್ನು ಶೇರ್ ಮಾಡಿದ್ದರು. ''ನಮಗೆ ಹಲವಾರು ಚಿಂತೆ, ಭಯ ಮತ್ತು ಅನುಮಾನಗಳು ಇದ್ದರೆ, ನಾವು ಬದುಕಲು ಮತ್ತು ಪ್ರೀತಿಸಲು ಸಾಧ್ಯವಿಲ್ಲ. ನಾವು ಅವುಗಳನ್ನೆಲ್ಲ ನಿರ್ಲಕ್ಷಿಸಿ ಮುನ್ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು" ಎಂದು ಕೊಹ್ಲಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿನ ಕಳಪೆ ಪ್ರದರ್ಶನದ ಬಳಿಕ ಟ್ರೋಲ್ ಮಾಡಿದಾಗಲೂ ವಿರಾಟ್ ಕೊಹ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. "ಇತರರ ಅಭಿಪ್ರಾಯಗಳೆಂಬ ಸೆರೆಮನೆಯಿಂದ ಮುಕ್ತರಾಗಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು" ಎಂದು ವಿರಾಟ್ ಕೊಹ್ಲಿ ಪೋಸ್ಟ್ ಹಾಕಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರ ಫೈನಲ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಟ್ಟ ಹೊಡೆತ ಆಯ್ಕೆಗಾಗಿ ಹಿರಿಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ''ಅದೊಂದು ಕೆಟ್ಟ ಹೊಡೆತ, ಈ ಬಗ್ಗೆ ನೀವು ವಿರಾಟ್ ಕೊಹ್ಲಿಯನ್ನೇ ಕೇಳಬೇಕು. ಆಫ್-ಸ್ಟಂಪ್ ಹೊರಗಿದ್ದ ಎಸೆತಕ್ಕೆ ಆಡಿದ್ದಾರೆ. ನೀವು ಪಂದ್ಯ ಗೆಲ್ಲಲು ಹೊರಟಿರುವಾಗ ಸುದೀರ್ಘ ಇನ್ನಿಂಗ್ಸ್, ಗೆಲ್ಲಲು ಒಂದು ಶತಕಕ್ಕೂ ಮೀರಿದ ಇನ್ನಿಂಗ್ಸ್ ಆಡುವುದು ಅಗತ್ಯವಾಗಿದೆ. ಆದರೆ ಹೊರಹೋಗುತ್ತಿರುವ ಎಸೆತವನ್ನು ಆಡಲು ಯತ್ನಿಸಿದರೆ ಶತಕ ಮತ್ತು ದೊಡ್ಡ ಇನ್ನಿಂಗ್ಸ್ ಮೂಡಿ ಬರಲು ಅಸಾಧ್ಯ'' ಎಂದು ಗವಾಸ್ಕರ್ ವಿರಾಟ್ ಕೊಹ್ಲಿಯ ವಿಕೆಟ್ ಪತನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: WTC Final: ಸೆಮಿಸ್, ಫೈನಲ್ ತಲುಪುವ ನಾವು ನಿರ್ಣಾಯಕ ದಿನ ಸೋತಿದ್ದೇವೆ: ಕೋಚ್ ದ್ರಾವಿಡ್