ನವದೆಹಲಿ: ವಿರಾಟ್ ಕೊಹ್ಲಿ ಇಂದು ಫಿಟ್ನೆಸ್ ವಿಚಾರದಲ್ಲಿ ಕ್ರಿಕೆಟ್ ಜಗತ್ತಿಗೆ ಮಾದರಿಯಾಗಿ ನಿಲ್ಲುವ ಕ್ರಿಕೆಟಿಗ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಗುಂಡುಗುಂಡಾಗಿದ್ದ ಯುವಕ, ನಂತರದ ದಿನಗಳಲ್ಲಿ ಫಿಟ್ನೆಸ್ ಕಾಪಾಡಿಕೊಂಡು ವಿಶ್ವದ ನಂಬರ್ 1 ಕ್ರಿಕೆಟಿಗನಾಗಿ ಬೆಳೆದ ಪರಿ ಇಂದಿನ ಯುವ ಕ್ರಿಕೆಟಿರಿಗೆ ಸ್ಫೂರ್ತಿ.
ಆದರೆ ಈ ಪರಿವರ್ತನೆಗೂ ಮುನ್ನ ಕೊಹ್ಲಿ ಬಹಳ ಆಹಾರಪ್ರಿಯರಾಗಿದ್ದರು. ತಮಗಿಷ್ಟವಾದುದನ್ನು ತಿನ್ನುವುದಕ್ಕೆ ಡೆಲ್ಲಿ ಕ್ರಿಕೆಟರ್ ಸಮಸ್ಯೆಗೆ ಸಿಲುಕುವುದನ್ನೂ ಲೆಕ್ಕಿಸುತ್ತಿರಲಿಲ್ಲ. ಕೊಹ್ಲಿಯ ಮಾಜಿ ರೂಮ್ಮೇಟ್ ಪ್ರದೀಪ್ ಸಂಗ್ವಾನ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಒಂದು ಪ್ರಸಂಗವನ್ನು ಬಹಿರಂಗಪಡಿಸಿದ್ದಾರೆ.
"ನಾನು ಮತ್ತು ಕೊಹ್ಲಿ ಜೂನಿಯರ್ ವಿಭಾಗದ ಕ್ರಿಕೆಟ್ ವೇಳೆ ಏಳೆಂಟು ವರ್ಷಗಳ ಕಾಲ ರೂಮ್ಮೇಟ್ಗಳಾಗಿದ್ದೆವು. ಆ ಸಂದರ್ಭದಲ್ಲಿ ಕೊಹ್ಲಿ ತುಂಬಾ ಆಹಾರಪ್ರಿಯರಾಗಿದ್ದರು. ಅದರಲ್ಲೂ ಬೀದಿಬದಿ ಮಾರುವ ತಿನಿಸುಗಳನ್ನು ಬಹಳ ತಿನ್ನುತ್ತಿದ್ದರು. ಕೂರ್ಮಾ ರೋಲ್ಸ್, ಚಿಕನ್ ರೋಲ್ಸ್ ಅವರಿಗೆ ಅಚ್ಚುಮೆಚ್ಚು. ನಾವು ಅಂಡರ್ 19 ತಂಡದ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿದ್ದೆವು. ಅಲ್ಲಿ ಯಾರೋ ಒಂದು ಜಾಗದಲ್ಲಿ ರುಚಿಕರ ಮಟನ್ ರೋಲ್ ಸಿಗುತ್ತದೆ ಎಂದು ಹೇಳಿದರು. ಜೊತೆಗೆ ಆ ಜಾಗದ ಸುತ್ತಮುತ್ತಲಿನ ಜನ ಅಪಾಯಕಾರಿ ಎಂದು ಅವರು ನಮಗೆ ತಿಳಿಸಿದ್ದರು.
ನಮ್ಮ ಚಾಲಕ ಕೂಡ ಅಲ್ಲಿನ ತಿನಿಸು ಉತ್ತಮವಾಗಿರುತ್ತದೆ. ಅದರೆ ಇತ್ತೀಚೆಗೆ ಅಲ್ಲಿ ಒಂದು ಗಲಾಟೆ ನಡೆದಿತ್ತು. ಆ ವೇಳೆ ಒಬ್ಬ ವ್ಯಕ್ತಿಯ ಕೈಗೆ ಚಾಕು ಹಾಕಲಾಗಿತ್ತು ಎಂದರು. ನಾನು ಭಯಪಟ್ಟೆ, ಆದರೆ ಕೊಹ್ಲಿ ಏನೂ ಆಗಲ್ಲ, ಬಾರೋ ಹೋಗೋಣ ಎಂದು ನನ್ನನ್ನೂ ಕರೆದೊಯ್ದರು. ಅಲ್ಲಿ ನಾವು ಮಟನ್ ರೋಲ್ ತಿಂದೆವು. ಆದರೆ ಅಂದುಕೊಂಡಂತೆ ಕೆಲವು ಮಂದಿ ನಮ್ಮನ್ನು ಹಿಂಬಾಲಿಸಲಾರಂಭಿಸಿದರು. ನಂತರ ಕಾರನ್ನು ಎಲ್ಲೂ ನಿಲ್ಲಿಸದೆ ನಾವು ತಂಗಿದ್ದ ಸ್ಥಳಕ್ಕೆ ಆಗಮಿಸಿದೆವು ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ಬರೆದಿರುವ ಲೇಖನವೊಂದರಲ್ಲಿ ಸಂಗ್ವಾನ್ ವಿವರಿಸಿದ್ದಾರೆ.
ಕೊಹ್ಲಿ ಭಾರತ ತಂಡಕ್ಕೆ ಸೇರಿದ ನಂತರ ಫಿಟ್ನೆಸ್ ಕಡೆಗೆ ಸಾಕಷ್ಟು ಗಮನಹರಿಸಿದರು. ಅವರು ಬ್ಯಾಟರ್ ಜೊತೆಗೆ ಒಬ್ಬ ಶ್ರೇಷ್ಠ ಫೀಲ್ಡರ್ ಎನಿಸಿಕೊಳ್ಳುವುದಕ್ಕೆ ಬಯಸುತ್ತಿದ್ದರು. ಅದಕ್ಕಾಗಿ ಕಠಿಣ ಆಹಾರ ಪದ್ದತಿ ಅನುಸರಿಸಿ ಕೊನೆಗೆ ತಾವಂದುಕೊಂಡಂತೆ ಸಾಧಿಸಿದರು ಎಂದು ಸಂಗ್ವಾನ್ ಹೇಳುತ್ತಾರೆ.
ಇದನ್ನೂ ಓದಿ:ನನ್ನ 8ನೇ ವಯಸ್ಸಿನಲ್ಲಿ ಭಾರತದ 2ನೇ ಕಪಿಲ್ ದೇವ್ ಆಗಬೇಕೆಂದು ಬಯಸಿದ್ದೆ: ಆರ್.ಅಶ್ವಿನ್