ಟಿ-20 ನಾಯಕತ್ವ ತೊರೆದ ಕಿಂಗ್ ಕೊಹ್ಲಿ: ಚುಟುಕು ಕ್ರಿಕೆಟ್ನಲ್ಲಿ ಅವರ ಸಾಧನೆ ಏನು? - ವಿಶ್ವಕಪ್ ನಂತರ ಟಿ20 ನಾಯಕತ್ವ ಬಿಡುವುದಾಗಿ ವಿರಾಟ್ ಘೋಷಣೆ
ಟಿ-20 ನಾಯಕತ್ವ ತೊರೆಯುವುದಾಗಿ ಘೋಷಣೆ ಮಾಡಿರುವ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ, ಅವರ ಸಾಧನೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಹೈದರಾಬಾದ್: ಮೂರು ಮಾದರಿ ಕ್ರಿಕೆಟ್ನಲ್ಲಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ರನ್ ಮಷಿನ್ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ನ ನಾಯಕತ್ವ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಯುಎಇನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ಮುಗಿಯುತ್ತಿದ್ದಂತೆ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.
2017ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಹೆಗಲಿಗೆ ಆ ಜವಾಬ್ದಾರಿ ನೀಡಲಾಗಿತ್ತು. ಇಲ್ಲಿಯವರೆಗೂ ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿರುವ ಡೆಲ್ಲಿ ಡ್ಯಾಶರ್ ನಾಯಕನಾಗಿ 48.45ರ ಸರಾಸರಿ ಹಾಗೂ 143.18ರ ಸ್ಟ್ರೈಕ್ ರೇಟ್ನೊಂದಿಗೆ 1502ರನ್ಗಳಿಕೆ ಮಾಡಿದ್ದಾರೆ. ಇದರಲ್ಲಿ 12 ಅರ್ಧಶತಕ ಸೇರಿವೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ನಿಜವಾದ ಆಸ್ತಿ: ಗಂಗೂಲಿ ಗುಣಗಾನ
ಟಿ-20 ಕ್ಯಾಪ್ಟನ್ ಆಗಿ ವಿರಾಟ್ ಸಾಧನೆ
ಇಲ್ಲಿಯವರೆಗೆ 45 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿರುವ ವಿರಾಟ್ 27ರಲ್ಲಿ ಗೆಲುವು ಸಾಧಿಸಿದ್ದು, 14 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಉಳಿದಂತೆ 2 ಪಂದ್ಯ ಟೈ ಆಗಿದ್ದು, ಮತ್ತೆರಡು ಪಂದ್ಯಗಳ ಫಲಿತಾಂಶ ಹೊರಬಿದ್ದಿಲ್ಲ.
ಟಿ-20 ಕ್ಯಾಪ್ಟನ್ ಆಗಿ ಅತಿ ಹೆಚ್ಚು 50+ ರನ್
ಚುಟುಕು ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ನಾಯಕನಾದ ಬಳಿಕ ವಿರಾಟ್ ಕೊಹ್ಲಿ 12 ಸಲ 50+ರನ್ಗಳಿಕೆ ಮಾಡಿದ್ದು, ಎಲ್ಲರಿಗಿಂತಲೂ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರ ತಲಾ 11 ಸಲ 50+ರನ್ಗಳಿಸಿರುವ ಪಾಕ್ನ ಬಾಬರ್ ಆಜಂ, ಆರೋನ್ ಫಿಂಚ್, ಕೇನ್ ವಿಲಿಯಮ್ಸನ್ ಹಾಗೂ 9ಸಲ 50ರ ಗಡಿ ದಾಟಿರುವ ಮಾರ್ಗನ್ ಇದ್ದಾರೆ.
ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ
132 ಪಂದ್ಯಗಳನ್ನಾಡಿರುವ ವಿರಾಟ್, 60ರಲ್ಲಿ ಗೆಲುವು, 65 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ನಾಲ್ಕು ಪಂದ್ಯಗಳಿಂದ ಯಾವುದೇ ಫಲಿತಾಂಶ ಬಂದಿಲ್ಲ.
ಟಿ-20ಯಲ್ಲಿ ರೋಹಿತ್ ಸಾಧನೆ
ಟಿ-20ಯ 19 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿರುವ ರೋಹಿತ್ ಶರ್ಮಾ 15ರಲ್ಲಿ ಗೆಲುವು ಸಾಧಿಸಿದ್ದು, ಕೇವಲ 4 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಅದೇ ರೀತಿ ಐಪಿಎಲ್ನ 132 ಪಂದ್ಯಗಳಲ್ಲಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿರುವ ರೋಹಿತ್ 74ರಲ್ಲಿ ಗೆಲುವು, 49ರಲ್ಲಿ ಸೋಲು ಕಂಡಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಉಪನಾಯಕನಾಗಿರುವ ರೋಹಿತ್ ಶರ್ಮಾಗೆ ವಿಶ್ವಕಪ್ ಮುಗಿದ ಬಳಿಕ ಟಿ-20 ಕ್ರಿಕೆಟ್ನ ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆ ದಟ್ಟವಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಹೆಸರು ಕೂಡ ಕೇಳಿ ಬರುತ್ತಿದೆಯಾದರೂ ನಾಯಕತ್ವದ ವಿಚಾರದಲ್ಲಿ ಅವರ ಸಾಧನೆ ಗಮನ ಸೆಳೆದಿಲ್ಲ.