ಮಥುರಾ: ಭಾರತ ತಂಡದ ರನ್ ಮಿಷನ್ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಜೊತೆಗೆ ಮಂಗಳವಾರ ಪ್ರಸಿದ್ಧ ಮಥುರಾದ ವೃಂದಾವನಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿಯ ನೀಮ್ ಕರೋಲಿ ದೇವಸ್ಥಾನಕ್ಕೆ ಗುಪ್ತವಾಗಿ ಭೇಟಿ ನೀಡಿರುವ ಅವರು, ಪತ್ನಿಯೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಭೇಟಿಯನ್ನು ಗೌಪ್ಯವಾಗಿಡಲಾಗಿತ್ತು. ಆದರೂ, ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿಶೇಷ ಭೇಟಿ ಹಿನ್ನೆಲೆಯಲ್ಲಿ ವಿರಾಟ್ ಮತ್ತು ಅನುಷ್ಕಾ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಕಂಬಳಿಗಳನ್ನು ಪ್ರಸಾದವಾಗಿ ನೀಡಿದರು. ಇದಕ್ಕೂ ಮುನ್ನ ದಂಪತಿಯು ಕುಟೀರದಲ್ಲಿ ಕೆಲಹೊತ್ತು ಕುಳಿತು ಧ್ಯಾನವನ್ನೂ ಸಹ ಮಾಡಿದರು.
ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ವಿರುಷ್ಕಾ ಜೋಡಿ: ಈ ವೇಳೆ, ಮಾಧ್ಯಮಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಇದರ ಹೊರತಾಗಿಯೂ ಅವರ ಭೇಟಿಯ ಫೋಟೋ ಜಾಲತಾಣದಲ್ಲಿ ಜಾಗ ಪಡೆದಿದೆ. ಶ್ರೀ ಶ್ರೀ ಮಾ ಆನಂದಮಾಯಿ ಆಶ್ರಮದಲ್ಲಿನ ಅಭಿಮಾನಿಯೊಬ್ಬರ ಬ್ಯಾಟ್ ಮೇಲೆ ವಿರಾಟ್ ಕೊಹ್ಲಿ ತಮ್ಮ ಆಟೋಗ್ರಾಫ್ ಕೂಡ ನೀಡಿದ್ದಾರೆ.
ಮಾಹಿತಿ ಪ್ರಕಾರ ಅವರು ಮಧ್ಯಾಹ್ನ 12:00 ಗಂಟೆಗೆ ಬರಬೇಕಿತ್ತು. ಆದರೆ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೆಳಗ್ಗೆಯೇ ವೃಂದಾವನ ತಲುಪಿದ್ದರು. ಸದ್ಯ ಅವರು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಇಬ್ಬರಿಗೂ ಬಾಬಾ ನೀಮ್ ಕರೋಲಿ ಮಹಾರಾಜ್ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡವರು.
ಕರೋಲಿ ಬಾಬಾ ಆಶೀರ್ವಾದ ಪಡೆದ ಜನಪ್ರಿಯ ದಂಪತಿ: ಹಾಗಾಗಿ ಇದಕ್ಕೂ ಮುನ್ನ ಕಳೆದ ವರ್ಷ ನವೆಂಬರ್‌ನಲ್ಲಿ ದಂಪತಿ ಧಾಮಕ್ಕೆ ಭೇಟಿ ನೀಡಿದ್ದರು. ಇಲ್ಲಿಯ ನೀಮ್ ಕರೋಲಿ ಬಾಬಾ ಅವರ ಆಶೀರ್ವಾದವನ್ನು ಸಹ ಪಡೆದಿದ್ದರು. ಸದ್ಯ ಭಾರತೀಯ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಟಿ-20 ಸರಣಿಯಲ್ಲಿ ತೊಡಗಿದ್ದು ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ಮುಂಬರುವ ಏಕದಿನ ಪಂದ್ಯಕ್ಕೆ ಅವರು ತಂಡವನ್ನು ಸೇರ್ಪಡೆಯಾಗಲಿದ್ದಾರೆ.
ಮಗಳ ಆರೈಕೆಯಲ್ಲಿ ಅನುಷ್ಕಾ ಬ್ಯುಸಿ: ಇನ್ನು ಅನುಷ್ಕಾ ಶರ್ಮಾ ಮಗಳ ಆರೈಕೆಯಲ್ಲಿ ತೊಡಗಿದ್ದು, ಶೀಘ್ರದಲ್ಲೇ ತೆರೆಮೇಲೆ ಆಗಮಿಸಲಿದ್ದಾರೆ. 2018 ರಲ್ಲಿ ಶಾರುಖ್ ಖಾನ್ ನಟನೆಯ ಜೀರೋ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಸದ್ಯ ಕ್ರಿಕೆಟ್ ಪಟು ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಚಕ್ದಾ ಎಕ್ಸ್‌ಪ್ರೆಸ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರವು ಶೀಘ್ರದಲ್ಲೇ ತೆರೆ ಕಾಣಲಿದೆ.
ಬಾಬಾ ನೀಮ್ ಕರೋಲಿ ಮಹಾರಾಜರು ದೈವೀ ಪುರುಷರಾಗಿದ್ದು, ಇಲ್ಲಿಯ ಭಕ್ತರು ಇವರನ್ನು ಹನುಮಾನ್ ಜಿಯ ಅವತಾರ ಎಂದೇ ಭಾವಿಸಿಕೊಂಡಿದ್ದಾರೆ. ಹಾಗಾಗಿ ಭಕ್ತರು ದೇಶ - ವಿದೇಶಗಳಿಂದ ಆಗಮಿಸಿ ಅವರ ಸಮಾಧಿಗೆ ಭೇಟಿ ಆಶೀರ್ವಾದ ಪಡೆಯುತ್ತಾರೆ. ಭೇಟಿ ವೇಳೆ ಕೆಲಹೊತ್ತು ಕುಳಿತು ಧ್ಯಾನ ಮಾಡಿ ತೆರಳುವುದು ಸಾಮಾನ್ಯ.
ಇದನ್ನೂ ಓದಿ: ನೀವೊಬ್ಬ ಫೈಟರ್.. ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುತ್ತೀರಿ.. ದ್ರಾವಿಡ್ ಸೇರಿ ಕ್ರಿಕೆಟಿಗರ ಭಾವನಾತ್ಮಕ ನುಡಿ