ಗುವಾಹಟಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಬೆಳಕಿಗೆ ಬಂದ ಪ್ರತಿಭೆ, ಜಮ್ಮು ಕಾಶ್ಮೀರದ ಉಮ್ರಾನ್ ಮಲಿಕ್ ಸದ್ಯ ಭಾರತದ ಭರವಸೆಯ ಆಟಗಾರ. ತಮ್ಮ ಬೆಂಕಿ ಚೆಂಡಿನ ವೇಗದಿಂದಲೇ ಗುರುತಿಸಿಕೊಂಡಿರುವ ಮಲಿಕ್, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮದೇ ವೇಗದ ಬೌಲಿಂಗ್ ದಾಖಲೆಯನ್ನು ಪುಡಿಗಟ್ಟಿದ್ದಾರೆ. 156 ಕಿಮೀ ವೇಗದಲ್ಲಿ ಚೆಂಡೆಸೆದ ಭಾರತದ ವೇಗಿ ಎಂಬ ದಾಖಲೆಗಳ ಪುಟ ಸೇರಿದರು.
ನಿನ್ನೆ ನಡೆದ ಪಂದ್ಯದಲ್ಲಿ ಉಮ್ರಾನ್ ಪೌರುಷ: ಭಾರತದ 23 ವರ್ಷದ ಯುವವೇಗಿ ಲಂಕಾ ಎದುರು ತಮ್ಮ ತೋಳ್ಬಲ ಪ್ರದರ್ಶನ ಮಾಡಿದರು. 14ನೇ ಓವರ್ನಲ್ಲಿ 156 ಕಿಮೀ ವೇಗದಲ್ಲಿ ಬೌಲ್ ಮಾಡಿದರು. ಈ ಮೂಲಕ ಜಸ್ಪ್ರೀತ್ ಬೂಮ್ರಾ ಹೆಸರಲ್ಲಿದ್ದ ದಾಖಲೆಯನ್ನು ಮೀರಿದರು. ಬೂಮ್ರಾ ಏಕದಿನದಲ್ಲಿ ಭಾರತದ ಪರವಾಗಿ 153.36 ಕಿಮೀ ವೇಗದಲ್ಲಿ ಚೆಂಡೆಸೆದ ಮೊದಲಿಗರಾಗಿದ್ದರು.
ಇದಕ್ಕೂ ಮೊದಲು ಜಮ್ಮು ಕಾಶ್ಮೀರದ ಕುವರ, ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ 155 ಕಿಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಕಳೆದ ವರ್ಷದ ಐಪಿಎಲ್ ಪಂದ್ಯವೊಂದರಲ್ಲಿ 156.9 ಕಿಮೀ ವೇಗದಲ್ಲಿ ಬೌಲ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇನ್ನು, ನಿನ್ನೆಯ ಪಂದ್ಯದಲ್ಲಿ ಉಮ್ರಾನ್ ಮಲಿಕ್ 8 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟು 3 ವಿಕೆಟ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ ಚೆಂಡೆಸೆದ ದಾಖಲೆ ಪಾಕಿಸ್ತಾನದ ಮಾಜಿ ದೈತ್ಯ ವೇಗಿ ಶೋಯೆಬ್ ಅಖ್ತರ್ ಹೆಸರಲ್ಲಿದೆ. ಅಖ್ತರ್ 161.3 KMPH ವೇಗದಲ್ಲಿ ಬೌಲ್ ಮಾಡಿದ್ದು, ಈವರೆಗೂ ಯಾರೂ ಮುಟ್ಟಲಾಗದ ದಾಖಲೆಯಾಗಿಯೇ ಉಳಿದಿದೆ.
ವೇಗವಾಗಿ ಬೌಲ್ ಮಾಡೋದು ಇಷ್ಟ: ಪಂದ್ಯದ ಬಳಿಕ ಮಾತನಾಡಿದ ಶರವೇಗಿ ಉಮ್ರಾನ್, 'ನಾನು ಭಾರತದ ಪರವಾಗಿ 6 ಪಂದ್ಯಗಳನ್ನು ಆಡಿದ್ದೇನೆ. ಲೈನ್ ಅಂಡ್ ಲೆನ್ತ್ ಬೌಲ್ ಮಾಡುವುದರ ಕಡೆಗೆ ಗಮನ ಹರಿಸುವೆ. ವಿಕೆಟ್ ಗಳಿಸುವುದು ಮುಖ್ಯ ಗುರಿಯಾಗಿರುತ್ತದೆ. ಪಿಚ್ ಸಮತಟ್ಟಾಗಿದ್ದ ಕಾರಣ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಲು ನೆರವಾಯಿತು. ಮೊಹಮದ್ ಸಿರಾಜ್, ಶಮಿ ಅವರ ಜೊತೆ ಚರ್ಚಿಸಿದ ಬಳಿಕ ವೇಗವನ್ನು ಹೆಚ್ಚಿಸಿದೆ' ಎಂದು ಹೇಳಿದರು.
'ನಾನು ಯಾವುದೇ ಪರಿಸ್ಥಿತಿಯಲ್ಲಿ ವೇಗವಾಗಿ ಬೌಲಿಂಗ್ ಮಾಡುವುದನ್ನು ಬಯಸುತ್ತೇನೆ. ದಾಂಡಿಗನ ವಿಕೆಟ್ ಪಡೆಯಲು ವೇಗ ಬಳಸುವೆ. ತಂಡದ ಗೆಲುವಿಗೆ ಸಾಧ್ಯವಾದಷ್ಟು ಪ್ರಯತ್ನಿಸುವೆ' ಎಂದು ಅಭಿಪ್ರಾಯ ಹಂಚಿಕೊಂಡರು.
ಈ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 67 ರನ್ಗಳಿಂದ ಬಗ್ಗುಬಡಿಯಿತು. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ, ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್ರ ಅರ್ಧಶತಕದ ನೆರವಿನಿಂದ ಭಾರತ 7 ವಿಕೆಟ್ಗೆ 373 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಶ್ರೀಲಂಕಾಗೆ ನಾಯಕ ದಸುನ್ ಶನಕಾ ಅವರ ಶತಕ, ಪಥುಮ್ ನಿಸ್ಸಂಕಾರ ಅರ್ಧಶತಕ ಗಳಿಸಿದಾಗ್ಯೂ ತಂಡ 67 ರನ್ಗಳಿಂದ ಸೋಲು ಕಂಡಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
ಇದನ್ನೂ ಓದಿ: ರಣಜಿ ಟ್ರೋಫಿ: ಅಸ್ಸೋಂ ವಿರುದ್ಧ ಪೃಥ್ವಿ ಶಾ ದ್ವಿಶತಕ, ಮೊದಲ ತ್ರಿಶತಕದ ಗುರಿ