ಮುಂಬೈ: 2021ರ ಐಪಿಎಲ್ ಆವೃತ್ತಿಯಲ್ಲಿ ಗರಿಷ್ಠ ರನ್ಗಳಿಸಿ ಆರೆಂಜ್ ಕ್ಯಾಪ್ ಪಡೆದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿರುವ ಋತುರಾಜ್ ಗಾಯಕ್ವಾಡ್ ಪ್ರಸ್ತುತ ನಡೆಯುತ್ತಿರುವ ವಿಜಯ ಹಜಾರೆ ಟ್ರೋಪಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಅಮೋಘ ಫಾರ್ಮ್ನಲ್ಲಿದ್ದು, ಆತನನ್ನು ಭಾರತ ತಂಡಕ್ಕೆ ಕರೆತರಲು ಇದು ಸು -ಸಮಯ ಎಂದು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಋತುರಾಜ್ ಗಾಯಕ್ವಾಡ್ 2020ರ ಐಪಿಎಲ್ನ ಕೊನೆಯ 3 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಬೆನ್ನಲ್ಲೇ ಹಿಂದೆ ತಿರುಗಿ ನೋಡಿಲ್ಲ. 2021ರ ಐಪಿಎಲ್ನಲ್ಲಿ 16 ಪಂದ್ಯಗಳಿಂದ 626 ರನ್ಗಳಿಸಿ ಆರೆಂಜ್ ಕ್ಯಾಪ್ ಪಡೆದ ಕಿರಿಯ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದರು.
ನಂತರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಪಂದ್ಯಗಳಿಂದ 259 ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಹ್ಯಾಟ್ರಿಕ್ ಶತಕದ ಸಹಿತ ಬರೋಬ್ಬರಿ 435 ರನ್ಗಳಿಸಿದ್ದಾರೆ. ಹಾಗಾಗಿ ವೆಂಗ್ಸರ್ಕಾರ್ ಅತ್ಯುತ್ತಮ ಫಾರ್ಮ್ನಲ್ಲಿರುವ ಗಾಯಕ್ವಾಡ್ ಅವರನ್ನು ಮುಂಬರುವ ದಕ್ಷಿಣ ಆಫ್ರಕಾ ಪ್ರವಾಸಕ್ಕೆ ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.
ನೀವು ಫಾರ್ಮ್ನಲ್ಲಿರುವ ಬ್ಯಾಟರ್ನನ್ನು ಆಯ್ಕೆ ಮಾಡಬೇಕು. ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಆತ ಇನ್ನು ಎಷ್ಟು ರನ್ಗಳಿಸಬೇಕು? ಆತನನ್ನು ಆಯ್ಕೆಗಾರರು ಆಯ್ಕೆ ಮಾಡಲು ಇದು ಒಳ್ಳೆಯ ಸಮಯ ಮತ್ತು ಆತನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ರನ್ಗಳಿಸಲು ಅವಕಾಶ ಮಾಡಿಕೊಡಬೇಕೆಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಅಭ್ಯಾಸ ಶಿಬಿರಕ್ಕೆ ಹಾಜರಾಗದೇ ನಾಯಕತ್ವ ಕಳೆದುಕೊಂಡ ಬಗ್ಗೆ ಅಸಮಾಧಾನ ಹೊರ ಹಾಕಿದರಾ ಕೊಹ್ಲಿ?