ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ) : ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ 20 ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಡೆದುಕೊಂಡು ದಕ್ಷಿಣ ಆಫ್ರಿಕಾಕ್ಕೆ 203 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟೀಮ್ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ ಆರಂಭಿಕ ಯಶಸ್ವಿ ಜೈಸ್ವಾಲ್ (60) ಅರ್ಧಶತಕ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ (100) ಸಿಡಿಲಬ್ಬರದ ಶತಕದೊಂದಿಗೆ ತಂಡದ ಮೊತ್ತ 200ರ ಗಡಿ ದಾಟಿದೆ. ದಕ್ಷಿಣ ಆಫ್ರಿಕಾ ಪರ ಕೇಶವ ಮಹಾರಾಜ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಅವರು ಬ್ಯಾಲಿಂಗ್ ಆಯ್ಕೆ ಮಾಡಿಕೊಂಡು ಭಾರತ ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಇಂದು ಕೊನೆ ಟಿ20 ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಮಳೆಯಿಂದ ಮೊದಲ ಪಂದ್ಯ ರದ್ದಾಗಿದ್ದು, ಎರಡನೇ ಪಂದ್ಯದಲ್ಲಿ ಹರಿಣಗಳ ವಿರುದ್ಧ ಮುಗ್ಗರಿಸಿರುವುದರಿಂದ ಭಾರತ ಟಿ20 ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಹೀಗಾಗಿ ಮೂರನೇ ಟಿ20 ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿ ಸಮಬಲ ಸಾಧಿಸಲು ಬ್ಲೂ ಬಾಯ್ಸ್ ರೆಡಿಯಾಗಿದ್ದಾರೆ. ಆದರೆ, ಭಾರತ ಗೆಲುವು ಸಾಧಿಸಬೇಕಾದಲ್ಲಿ ನಿಯಂತ್ರಿತ ಬೌಲಿಂಗ್ ಪ್ರದರ್ಶನ ಅಗತ್ಯ ಇದೆ. ಎರಡನೇ ಟಿ-20 ಪಂದ್ಯದಲ್ಲಿ ಬೌಲರ್ಗಳು ಧಾರಾಳವಾಗಿ ರನ್ ಬಿಟ್ಟುಕೊಟ್ಟದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ಇನ್ನೊಂದಡೆ ಬಲಿಷ್ಠ ಬ್ಯಾಟಿಂಗ್ ಲೈನ್ ಆಪ್ ಹೊಂದಿರುವ ಹರಿಣಗಳ ಪಡೆ ಟಿ20 ಕ್ರಿಕೆಟ್ ಮಾದರಿಗೆ ಹೇಳಿ ಮಾಡಿಸಿದಂತಿದೆ. ಬೌಲಿಂಗ್ ವಿಭಾಗ ಕೂಡ ತಂಡಕ್ಕೆ ಸಹಾಯಕಾರಿಯಾಗಿದೆ. ಭಾರತದಲ್ಲಿ ನಡೆದ 2023ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿ ಉದ್ದಕ್ಕೂ ದಕ್ಷಿಣ ಆಫ್ರಿಕಾ ಬೃಹತ್ ರನ್ ಕಲೆ ಹಾಕಿ ಮತ್ತು ಬೌಲಿಂಗ್ನಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ ಸತತ ಗೆಲುವು ದಾಖಲಿಸಿತ್ತು. ಈ ಸಂಘಟಿತ ಆಟವೇ ಹರಿಣಗಳ ಪಡೆ ಸೆಮಿಫೈನಲ್ ತಲುಪಲು ಅಡಿಪಾಯವಾಗಿತ್ತು. ಇದೇ ಉತ್ಸಾಹದಲ್ಲಿರುವ ನಾಯಕ ಐಡೆನ್ ಮಾರ್ಕ್ರಾಮ್ ಸರಣಿ ಕೈ ವಶ ಮಾಡಿಕೊಳ್ಳುವ ಚಿಂತನೆಯಲ್ಲಿದ್ದಾರೆ.
ತಂಡಗಳು ಹೀಗಿವೆ.. ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ : ರೀಜಾ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಜ್ಕೆ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೀ), ಡೇವಿಡ್ ಮಿಲ್ಲರ್, ಡೊನೊವನ್ ಫೆರೆರಾ, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ, ನಾಂಡ್ರೆ ಬರ್ಗರ್
ಭಾರತ ಪ್ಲೇಯಿಂಗ್ ಇಲೆವೆನ್ : ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೀ), ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮುಖೇಶ್ ಕುಮಾರ್
ಇದನ್ನೂ ಓದಿ : ಸರಣಿ ಸಮಬಲಕ್ಕೆ ಸೂರ್ಯ ಚಿಂತನೆ: ಬೌಲಿಂಗ್ ಸುಧಾರಣೆಯೇ ಗೆಲುವಿನ ತಂತ್ರ..!