ಮುಂಬೈ: ಭಾರತ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಾಗ ಅಸೂಯೆಯಿಂದ ಕೆಲವು ಗುಂಪು ನಾನು ವಿಫಲನಾಗಬೇಕೆಂದು ಎದುರು ನೋಡುತ್ತಿತ್ತು. ಆದರೆ ಇಂತಹವುಗಳನ್ನು ನಿಭಾಯಿಸಲು ಡ್ಯೂಕ್ ಬಾಲ್ಗಳ ಚರ್ಮಕ್ಕಿಂತ ಅಗತ್ಯವಾದ ಸಾಮರ್ಥ್ಯ ಹೊಂದಿದ್ದೇನೆ ಎಂಬುದು ನಂಗೊತ್ತಿತ್ತು ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಶಾಸ್ತ್ರಿ 2021ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. 2014ರಿಂದ 2016 ರವರೆಗೆ ಭಾರತದ ಡೈರೆಕ್ಟರ್ ಆಗಿದ್ದ ಅವರು ಮತ್ತೆ 2017ರಿಂದ 2021ರ ವರೆಗೆ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಸುದೀರ್ಘ ಅವಧಿಯ ಬಗ್ಗೆ ಬ್ರಿಟಿಷ್ ಪತ್ರಿಕೆ ನಡೆಸಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಶಾಸ್ತ್ರಿ, ತಾವು ಯಾವುದೇ ಕೋಚಿಂಗ್ ಬ್ಯಾಡ್ಜ್ ಇಲ್ಲದೆ ರಾಷ್ಟ್ರೀಯ ತಂಡದ ಜವಾಬ್ದಾರಿ ತೆಗೆದುಕೊಂಡಿದ್ದರಿಂದ ತುಂಬಾ ಜನ ನನ್ನ ಬಗ್ಗೆ ಅಸೂಯೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
ನನ್ನಲ್ಲಿ ಲೆವೆಲ್ ಒನ್? ಅಥವಾ ಲೆವೆಲ್ 2? ಅಂತಹ ಯಾವುದೇ ಕೋಚಿಂಗ್ ಬ್ಯಾಡ್ಜ್ಗಳಿರಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಆದರೆ ಭಾರತದಂತಹ ದೇಶದಲ್ಲಿ, ಯಾವಾಗಲೂ ಆಸೂಯೆ ಅಥವಾ ನಿಮ್ಮ ವೈಫಲ್ಯವನ್ನು ಬಯಸುವ ಒಂದು ಗುಂಪು ಇರುತ್ತದೆ. ನಾನು ಡ್ಯೂಕ್ ಚೆಂಡಿಗಿಂತಲೂ ದಪ್ಪ ಚರ್ಮವನ್ನು ಹೊಂದಿದ್ದಿರಂದ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ ಎಂದರು.
2014ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಓವೆಲ್ನಲ್ಲಿ ಕಾಮೆಂಟರಿ ಮಾಡುತ್ತಿದ್ದಾಗ ಬಿಸಿಸಿಐ ನನಗೆ ಟೀಮ್ ಇಂಡಿಯಾದ ಡೈರೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚನೆ ನೀಡಿತು. ನನಗೆ ಈ ಕುರಿತಾಗಿ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲ. ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ನಾನು ಓವೆಲ್ನಲ್ಲಿ ಕಾಮೆಂಟರಿ ಮಾಡುತ್ತಿದ್ದೆ, ಬಿಡುವಿನ ವೇಳೆ ಮೊಬೈಲ್ ನೋಡಿದಾಗ ಆರೇಳು ಮಿಸ್ ಕಾಲ್ಸ್ ಇದ್ದವು. 7 ಕರೆಗಳು? ಏನಾಗಿರಬಹುದು? ಎಂದೆನಿಸಿತು. "ನಾಳೆಯಿಂದಲೇ ನೀವು ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸುತ್ತೇವೆ" ಎಂದು ಬಿಸಿಸಿಐ ತಿಳಿಸಿತು. ನಾನು ನನ್ನ ಕುಟುಂಬ ಮತ್ತು ಕಮರ್ಸಿಯಲ್ ಪಾರ್ಟ್ನರ್ಗಳೊಂದಿಗೆ ಮಾತನಾಡಬೇಕೆಂದು ತಿಳಿಸಿದೆ. ಆದರೆ ಎಲ್ಲವನ್ನೂ ನಾವೇ ನೋಡಿಕೊಳ್ಳುವುದಾಗಿ ಅವರು ತಿಳಿಸಿದರು.
ನಾನು ನೇರವಾಗಿ ಕಾಮೆಂಟರಿ ಬಾಕ್ಸ್ನಿಂದ ಏಕದಿನ ಸರಣಿಯ ಸಿದ್ಧತೆಯಲ್ಲಿದ್ದ ಭಾರತ ತಂಡ ಸೇರಿಕೊಂಡೆ. ತಕ್ಷಣದಲ್ಲೇ ನನ್ನ ಕೆಲಸ ಬದಲಾಗಿತ್ತು. ಬೇಕಾದರೆ ನೀವು ನಾನು ಆ ಸಂದರ್ಭದಲ್ಲಿ ನಾನು ಜೀನ್ಸ್ ಮತ್ತು ಲೂಫರ್ಸ್ನಲ್ಲಿದ್ದುದನ್ನು ಕಾಣಬಹುದು ಎಂದು ತಾವೂ ಭಾರತ ತಂಡಕ್ಕೆ ಸೇರಿದ ಕ್ಷಣಗಳನ್ನು ಸ್ಮರಿಸಿದರು.
ಶಾಸ್ತ್ರಿ ಕೋಚಿಂಗ್ ಅವಧಿಯಲ್ಲಿ ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲಲಿಲ್ಲ ಎನ್ನುವುದನ್ನು ಬಿಟ್ಟರೆ, ನಿಜಕ್ಕೂ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಬಹಳ ಬಲಿಷ್ಠವಾಗಿತ್ತು. ಆಸ್ಟ್ರೇಲಿಯಾದಲ್ಲಿ 2 ಟೆಸ್ಟ್ ಸರಣಿ, ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಜಯ ಮತ್ತು ದೀರ್ಘಕಾಲದವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಾಬಲ್ಯಯುತ ನಂಬರ್ 1 ತಂಡವಾಗಿ ಗುರುತಿಸಿಕೊಂಡಿತ್ತು.
ಇದನ್ನೂ ಓದಿ:ಈ ಯುವಕ ಐಪಿಎಲ್ನ ಶ್ರೇಷ್ಠ ಡೆತ್ ಬೌಲರ್: ಕಗಿಸೋ ರಬಾಡ ಮೆಚ್ಚುಗೆ