ಲಂಡನ್: ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತಿರುವ ಆತಿಥೇಯ ಇಂಗ್ಲೆಂಡ್ ಮುಂದಿನ ಪಂದ್ಯ ಗೆದ್ದು ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಹೀಗಾಗಿ ಮುಂದಿನ ಪಂದ್ಯಗಳಿಗೆ ಆಲ್ರೌಂಡರ್ ಬೆನ್ ಸ್ಟೋಕ್ಸ್ರನ್ನು ತಂಡಕ್ಕೆ ಮರಳಿ ಕರೆತರುವ ಯೋಚನೆಯಲ್ಲಿದೆ ಎಂದು ತಿಳಿದುಬಂದಿದೆ. ಮಾನಸಿಕ ಕಾರಣದಿಂದ ಕಳೆದ ತಿಂಗಳಿನಿಂದ ಸ್ಟೋಕ್ಸ್ ಅನಿರ್ದಿಷ್ಟಾವಧಿಗೆ ತಂಡದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದರು.
ಐದು ಪಂದ್ಯಗಳ ಸರಣಿಯಲ್ಲಿ ನಾಟಿಂಗ್ಹ್ಯಾಮ್ ಟೆಸ್ಟ್ ಮಳೆಯಿಂದ ಡ್ರಾನಲ್ಲಿ ಅಂತ್ಯಗೊಂಡಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೊಹ್ಲಿ ಪಡೆ 151 ರನ್‌ಗಳ ಭರ್ಜರಿ ಜಯ ಗಳಿಸಿ 2-0 ಸರಣಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಗೆಲುವಿನ ಫೇವರಿಟ್ ಆಗಿತ್ತು. ಆದರೆ 5ನೇ ದಿನ ಭಾರತ ಭರ್ಜರಿ ಪ್ರದರ್ಶನ ತೋರಿ ಆಂಗ್ಲರಿಗೆ ಸೋಲುಣಿಸಿದೆ.
ಸ್ಟೋಕ್ಸ್ ಕಮ್ಬ್ಯಾಕ್ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್, ಬೆನ್ ಸ್ಟೋಕ್ಸ್ ಆಡಲು ಸಿದ್ಧರಾಗಿದ್ದಾರೆಯೇ ಎಂಬುದನ್ನು ಸ್ವಲ್ಪ ಕಾದು ನೋಡಲಾಗುವುದು. ಈ ನಿರ್ಧಾರವು ಸ್ಟೋಕ್ಸ್ ಮತ್ತು ಅವರ ಕುಟುಂಬದವರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಬೆನ್ ಸ್ಟೋಕ್ಸ್ ಹಾಗೂ ಅವರ ಕುಟುಂಬವು ಉತ್ತಮ ಸ್ಥಿತಿಯಲ್ಲಿರುವುದೇ ನಮಗೆ ಮುಖ್ಯವಾಗಿದೆ. ಹಾಗಿದ್ದರೆ ಮಾತ್ರ ಸ್ಟೋಕ್ಸ್ ಬಲಿಷ್ಠವಾಗಿ ಮರಳಲಿದ್ದಾರೆ. ಮಾನಸಿಕವಾಗಿ ಅವರು ಆಡಲು ತಯಾರಿದ್ದರೆ ಮಾತ್ರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಸ್ಟೋಕ್ಸ್ ಪ್ರತಿಕ್ರಿಯೆಗಾಗಿ ಯಾವುದೇ ಒತ್ತಡ ಹೇರುವುದಿಲ್ಲ, ಅದು ಸರಿ ಎಂದು ಕೂಡ ನನಗನಿಸುವುದಿಲ್ಲ. ಸ್ಟೋಕ್ಸ್ಗೆ ಎಲ್ಲರಿಂದ ಬೆಂಬಲ ವ್ಯಕ್ತವಾಗುತ್ತಿದೆ. ತಂಡಕ್ಕೆ ಬರಲು ತಯಾರಾದಾಗ, ನಾವು ಸ್ವಾಗತಿಸುತ್ತೇವೆ. ಅಲ್ಲಿಯವರೆಗೂ ನಮ್ಮ ಬೆಂಬಲ ಸದಾ ಇರಲಿದೆ ಎಂದು ಸಿಲ್ವರ್‌ವುಡ್ ತಿಳಿಸಿದ್ದಾರೆ.
5 ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಆ.25ರಿಂದ ಲೀಡ್ಸ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: 'ತಾಲಿಬಾನಿಗಳು ಯಾವಾಗ ಮನೆ ಬಾಗಿಲು ಬಡೀತಾರೋ ಎಂಬ ಭಯದಲ್ಲೇ ನಮ್ಮ ಬದುಕು': ಕಾಬೂಲ್ ಮಹಿಳಾಧಿಕಾರಿಯ ವೇದನೆ