ಮುಂಬೈ: ಭಾರತ ತಂಡದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಶ್ರೀಲಂಕಾ ವಿರುದ್ಧದ 3 ಟಿ-20 ಪಂದ್ಯಗಳಲ್ಲೂ ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ದಾಖಲೆ ಸರಿದೂಗಿಸಿದ್ದರು. ಇದೀಗ ಕೊಹ್ಲಿ ಮೀಸಲಾಗಿರುವ 3ನೇ ಕ್ರಮಾಂಕದಲ್ಲಿ ಮುಂದುವರಿಯು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿರುವುದರಿಂದ ಶ್ರೇಯಸ್ ಅಯ್ಯರ್ಗೆ ಮ್ಯಾನೇಜ್ಮೆಂಟ್ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿತ್ತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಶ್ರೇಯಸ್ ಅಯ್ಯರ್ ಮೂರು ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 57, ಅಜೇಯ 4 ಮತ್ತು ಅಜೇಯ 73 ರನ್ಗಳಿಸಿ ಭಾರತ 3-0ಯಲ್ಲಿ ಟಿ-20 ಸರಣಿ ಜಯಿಸಲು ನೆರವಾಗಿದ್ದರು.
ನಾನು ನನ್ನಿಂದ ಅಥವಾ ತಂಡದ ಕೋಚ್‌ಗಳಿಂದ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಏಕೆಂದರೆ ನಮ್ಮ ತಂಡದಲ್ಲಿ ಅಪಾರವಾದ ಸ್ಪರ್ಧೆಯಿದೆ. ಪ್ರತಿಯೊಬ್ಬ ಆಟಗಾರನೂ ನಿಮಗೆ ಪಂದ್ಯಗಳನ್ನು ಗೆಲ್ಲಲು ಸಮರ್ಥರಾಗಿದ್ದಾರೆ. ವೈಯಕ್ತಿಕವಾಗಿ, ನನಗೆ ಸಿಕ್ಕಂತಹ ಪ್ರತಿಯೊಂದು ಕ್ಷಣ ಮತ್ತು ಅವಕಾಶವನ್ನು ನಾನು ಆನಂದಿಸಲು ಬಯಸುತ್ತೇನೆ ಎಂದು ಪಂದ್ಯದ ನಂತರ ನಡೆದ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಂದುವಿರಿಸಿ, ನಾನು ಮೈದಾನಕ್ಕೆ ಇಳಿಯುವಾಗಲೆಲ್ಲ ಪಂದ್ಯವನ್ನು ಫಿನಿಶ್ ಮಾಡುವುದಕ್ಕೆ ಬಯಸುತ್ತೇನೆ ಮತ್ತು ನನ್ನ ಮನಸ್ಥಿತಿ ಕೂಡ ಯಾವಾಗಲೂ ಹಾಗೆಯೇ ಇರುತ್ತದೆ ಎಂದು ಅಯ್ಯರ್ ತಿಳಿಸಿದ್ದಾರೆ.
3ನೇ ಕ್ರಮಾಂಕ ನನಗೆ ಸೂಕ್ತ: ನಿಸ್ಸಂಶಯವಾಗಿ ಈ ಸ್ವರೂಪದ ಕ್ರಿಕೆಟ್ನಲ್ಲಿ ಅಗ್ರ ಕ್ರಮಾಂಕದ 3 ಸ್ಥಾನಗಳಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುವ ಅವಕಾಶ ಇರುತ್ತದೆ. ಒಂದು ವೇಳೆ ನೀವು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದರೆ ನಿಮಗೆ ಸೆಟ್ ಆಗುವುದಕ್ಕೆ ಅವಕಾಶ ಇರುವುದಿಲ್ಲ ಮತ್ತು ನೀವು ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗಬೇಕಿರುತ್ತದೆ. ಆದ್ದರಿಂದ ವ್ಯಯಕ್ತಿಕವಾಗಿ ನನಗೆ ಯಾವುದು ಉತ್ತಮ ಕ್ರಮಾಂಕ ಎಂದು ಕೇಳಿದರೆ, ಅದು 3ನೇ ಕ್ರಮಾಂಕ ಎಂದು ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಸ್ಥಾನದಲ್ಲಿ ಆಡಿದ್ದಲ್ಲದೇ ಅವರ ಹೆಸರಲ್ಲಿದ್ದ ದಾಖಲೆ ಪುಡಿಗಟ್ಟಿದ ಶ್ರೇಯಸ್ ಅಯ್ಯರ್!