ಮೆಲ್ಬೋರ್ನ್(ಆಸ್ಟ್ರೇಲಿಯಾ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಆಡಳಿತ ಶುರುವಾಗುತ್ತಿದ್ದಂತೆ ಮಹಿಳಾ ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಲು ಮಹಿಳೆಯರಿಗೆ ಅನುಮತಿ ನೀಡುವುದಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಒಂದು ವೇಳೆ ತಾಲಿಬಾನ್ ಮಹಿಳಾ ಕ್ರಿಕೆಟ್ ಬ್ಯಾನ್ ಮಾಡಿದ್ರೆ, ಅಫ್ಘಾನಿಸ್ತಾನ ಪುರುಷ ತಂಡದೊಂದಿಗೆ ನಡೆಯಬೇಕಿರುವ ಏಕೈಕ ಟೆಸ್ಟ್ ಪಂದ್ಯ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಟೆಸ್ಟ್ ತಂಡದ ಕ್ಯಾಪ್ಟನ್ ಟಿಮ್ ಪೈನ್ ಕೂಡ ಮಹತ್ವದ ಹೇಳಿಕೆ ನೀಡಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡುವಂತೆ ಅವರು ಹೇಳಿದ್ದಾರೆ. ಟೆಸ್ಟ್ ಸ್ಥಾನಮಾನ ಹೊಂದಿರುವ ರಾಷ್ಟ್ರಗಳು, ಸಕ್ರಿಯ ಮಹಿಳಾ ತಂಡ ಹೊಂದಿರಬೇಕು. ಆದರೆ ಅಫ್ಘಾನಿಸ್ತಾನ ಇದಕ್ಕೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ವಿಶ್ವಕಪ್ನಲ್ಲಿ ಪುರುಷ ತಂಡ ಕೂಡ ಭಾಗಿಯಾಗದಂತೆ ಐಸಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಪೋರ್ಟ್ಸ್ ರೇಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಆಸ್ಟ್ರೇಲಿಯಾದ ಆಟಗಾರರು, ಕ್ರಿಕೆಟ್ ಆಸ್ಟ್ರೇಲಿಯಾ ನಿಲುವಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಅಫ್ಘಾನಿಸ್ತಾನದ ವಿಚಾರವಾಗಿ ಪ್ರತಿವೊಂದು ತಂಡವೂ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಟಿ-20 ವಿಶ್ವಕಪ್ಗೆ ಅಫ್ಘಾನಿಸ್ತಾನ ತಂಡ ಪ್ರಕಟಗೊಂಡಿದ್ದು, ನಾಯಕತ್ವ ಸ್ಥಾನಕ್ಕೆ ರಶೀದ್ ಖಾನ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಅಫ್ಘಾನ್ ಕ್ರಿಕೆಟ್ ಮಂಡಳಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ಕ್ಯಾಪ್ಟನ್ ಕೂಡ ತಮ್ಮ ಹೇಳಿಕೆ ನೀಡಿದ್ದು, ಇದಕ್ಕೆ ಐಸಿಸಿ ಹಾಗೂ ಇತರೆ ದೇಶದ ತಂಡಗಳು ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡಲಿವೆ ಎಂಬುದನ್ನ ಕಾಯ್ದುನೋಡಬೇಕಿದೆ.