ಹೈದರಾಬಾದ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮುಂದಿನ ತಿಂಗಳು ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಆದರೆ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಬೇಕೆಂಬ ಗೊಂದಲ ಇದೀಗ ಉದ್ಭವವಾಗಿದೆ. ಇದರ ಮಧ್ಯೆ ಯುವ ಬ್ಯಾಟ್ಸ್ಮನ್ಗಳಾಗಿರುವ ದೇವದತ್ ಪಡಿಕ್ಕಲ್ ಹಾಗೂ ಪೃಥ್ವಿ ಶಾಗೆ ಅವಕಾಶ ನೀಡಬೇಕು ಎಂಬ ಮಾತು ಕೇಳಿ ಬಂದಿದೆ.

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಜೂನ್ 28ರಂದು ಆಯ್ಕೆ ಸಮಿತಿಗೆ ಇಮೇಲ್ ಮಾಡಿದ್ದು, ಗಾಯಗೊಂಡಿರುವ ಶುಬ್ಮನ್ ಗಿಲ್ ಸ್ಥಾನಕ್ಕೆ ಇಬ್ಬರು ಬ್ಯಾಕ್ ಅಪ್ ಓಪನರ್ಗಳನ್ನ ಇಂಗ್ಲೆಂಡ್ಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾಗಿ ತಿಳಿದು ಬಂದಿದೆ. ಪ್ರಮುಖವಾಗಿ ಉದಯೋನ್ಮುಖ ಆಟಗಾರರಾಗಿರುವ ದೇವದತ್ ಪಡಿಕ್ಕಲ್ ಹಾಗೂ ಪೃಥ್ವಿ ಶಾಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.
ಆದರೆ ಈಗಾಗಲೇ ಇಂಗ್ಲೆಂಡ್ ಪ್ರವಾಸಕ್ಕಾಗಿ ಅಭಿಮನ್ಯು ಈಶ್ವರನ್ ಬ್ಯಾಕ್ ಅಪ್ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರಿಗೆ ಟೆಸ್ಟ್ ಪಂದ್ಯದಲ್ಲಿ ಆಡುವಷ್ಟು ತಂತ್ರಗಾರಿಕೆ ಇಲ್ಲ. ಹೀಗಾಗಿ ಪಡಿಕ್ಕಲ್ ಹಾಗೂ ಪೃಥ್ವಿ ಶಾಗೆ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಕೇಳಿದೆ.

ಈಗಾಗಲೇ ಇಂಗ್ಲೆಂಡ್ ಪ್ರವಾಸದಲ್ಲಿರುವ ಕೆ.ಎಲ್.ರಾಹುಲ್ಗೆ ಆರಂಭಿಕ ಆಟಗಾರನೆಂದು ಪರಿಗಣಿಸಿಲ್ಲ. ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಸದ್ಯ ಮಯಾಂಕ್ ಅಗರವಾಲ್ ಮಾತ್ರ ಓಪನರ್ ಆಗಿದ್ದಾರೆ. ಒಂದು ವೇಳೆ ಇರುವ ಆಟಗಾರರಲ್ಲಿ ಯಾರಾದರೂ ಗಾಯಗೊಂಡರೆ ಮತ್ತೆ ತಂಡ ತೊಂದರೆಗೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಮ್ಯಾನೇಜ್ಮೆಂಟ್ ಇಬ್ಬರು ಪ್ಲೇಯರ್ಸ್ಗೆ ಬ್ಯಾಕ್ ಆಪ್ ಆಗಿ ಕಳುಹಿಸುವಂತೆ ಕೇಳಿಕೊಂಡಿದೆ.
ಇದನ್ನೂ ಓದಿರಿ: IPL 2022: ಮುಂದಿನ ಆವೃತ್ತಿಯಲ್ಲಿ 10 ತಂಡ, 4 ಪ್ಲೇಯರ್ಸ್ ಮಾತ್ರ ಉಳಿಸಿಕೊಳ್ಳಲು ಅವಕಾಶ
ಪಡಿಕ್ಕಲ್, ಪೃಥ್ವಿ ಶಾ ಕಳುಹಿಸಲು ಆಯ್ಕೆ ಸಮಿತಿ ಹಿಂದೇಟು?
ಲಭ್ಯವಾಗಿರುವ ಮಾಹಿತಿ ಪ್ರಕಾರ, ಪಡಿಕ್ಕಲ್, ಪೃಥಿ ಶಾ ಅವರನ್ನ ಇಂಗ್ಲೆಂಡ್ಗೆ ಕಳುಹಿಸಲು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಶುಬ್ಮನ್ ಗಿಲ್ ಗಾಯಗೊಂಡಿದ್ದರೂ, ತಂಡದ ಆಡಳಿತ ಮಂಡಳಿ ಮನವಿಯನ್ನ ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ. ಹೀಗಾಗಿ ಅಭಿಮನ್ಯು ಈಶ್ವರನ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾಗೆ ಯಾವುದೇ ವಿಷಯ ಗೊತ್ತಿಲ್ಲ ಎನ್ನಲಾಗಿದೆ.
ಸದ್ಯ ಪಡಿಕ್ಕಲ್, ಪೃಥ್ವಿ ಶಾ ಶ್ರೀಲಂಕಾ ಪ್ರವಾಸದಲ್ಲಿದ್ದು ಏಕದಿನ ಹಾಗೂ ಟಿ-20 ಸರಣಿ ಮುಗಿಯುತ್ತಿದ್ದಂತೆ ಅವರು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿ, ಬಯೋ ಬಬಲ್ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಆದರೆ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಅವರು ಶ್ರೀಲಂಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆಗಲಿದ್ದಾರೆ.