ಢಾಕಾ: ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್ ಮುಂದಿನ ಆರು ತಿಂಗಳವರೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ಗುರುವಾರ ದಿಢೀರ್ ಬ್ರೇಕ್ ತೆಗೆದುಕೊಂಡಿದ್ದಾರೆ.
ಕಳೆದ ಟಿ20 ವಿಶ್ವಕಪ್ನಿಂದಲೂ ಚುಟುಕು ಮಾದರಿಯಿಂದ ದೂರ ಉಳಿದಿದ್ದ ತಮೀಮ್, ಇದೀಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಕಡೆ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.
"ಕಳೆದ ಎರಡು ದಿನಗಳ ಹಿಂದೆ ನಾನು ಬಿಸಿಬಿ ಅಧ್ಯಕ್ಷರು, ಸಿಎಒ ಜಲಾಲ್ ಭಾಯ್ ಮತ್ತು ಡೈರೆಕ್ಟರ್ ಕಾಜೀ ಇನಾಮ್ ಜೊತೆಗೆ ಚರ್ಚೆ ನಡೆಸಿದ್ದೇನೆ. ಅವರು ನನ್ನನ್ನು ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದಾರೆ. ವಿಶೇಷವಾಗಿ ಮುಂದಿನ ಟಿ20 ವಿಶ್ವಕಪ್ವರೆಗೆ ಟಿ20 ತ್ಯಜಿಸದಂತೆ ಮನವಿ ಮಾಡಿದ್ದಾರೆ".
ಇದನ್ನೂ ಓದಿ:RCB ಅಲ್ಲ, ಈ ತಂಡದ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ ಹರ್ಷಲ್ ಪಟೇಲ್
ಆದರೆ ನನ್ನ ದೃಷ್ಟಿ ವಿಭಿನ್ನವಾಗಿದೆ. ಮುಂದಿನ ಆರು ತಿಂಗಳವರೆಗೆ ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವುದಿಲ್ಲ ಎಂದು ನಾನು ಹೇಳಬಲ್ಲೆ. ಈ ಆರು ತಿಂಗಳ ಅವಧಿಯಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಹರಿಸುತ್ತೇನೆ. ನಾವು ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು 2023ರ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದೇವೆ, ಆದ್ದರಿಂದ ನಾನು ಈ ಎರಡು ಸ್ವರೂಪಗಳಲ್ಲಿ ಹೆಚ್ಚಿನ ಗಮನವನ್ನು ಇರಿಸುತ್ತೇನೆ ಎಂದು ಬಿಪಿಎಲ್ ಲೀಗ್ ವೇಳೆ ಪತ್ರಕರ್ತರಿಗೆ ಹೇಳಿದ್ದಾರೆ.
ರಾಷ್ಟ್ರೀಯ ತಂಡದ ಪರ ಆಡುತ್ತಿರುವವರು ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ನಾನು ಆ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಲಭ್ಯನಿರುವುದಿಲ್ಲ. 6 ತಿಂಗಳ ನಂತರ ಪರಿಸ್ಥಿತಿಗೆ ತಕ್ಕಂತೆ ತಂಡದ ಮ್ಯಾನೇಜ್ಮೆಂಟ್ ಟಿ20 ವಿಶ್ವಕಪ್ ತಂಡಕ್ಕೆ ಅಗತ್ಯ ಎಂದು ಭಾವಿಸಿದರೆ ನಾನು ಸಿದ್ಧನಿದ್ದೇನೆ ಎಂದು ತಮೀಮ್ ತಿಳಿಸಿದ್ದಾರೆ.
ಬಾಂಗ್ಲಾದೇಶದ ಪರ ತಮೀಮ್ ಇಕ್ಬಾಲ್ 78 ಪಂದ್ಯಗಳಿಂದ ಒಂದು ಶತಕ ಹಾಗೂ 7 ಅರ್ಧಶತಕಗಳ ಸಹಿತ 1758 ರನ್ಗಳಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ