ಮುಂಬೈ: ಭಾರತ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್, ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ವೇಗಿ ಉಮ್ರಾನ್ ಮಲಿಕ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದಾರೆ.
22 ವರ್ಷದ ಜಮ್ಮುಕಾಶ್ಮೀರದ ಪೇಸರ್ ಬುಧವಾರ ಐಪಿಎಲ್ ಇತಿಹಾಸದಲ್ಲಿ ಮಾರಕ ಸ್ಪೆಲ್ ಮಾಡಿದರು. ಕೇವಲ 25 ರನ್ ನೀಡಿ ಎದುರಾಳಿ ಕಳೆದುಕೊಂಡ ಐದೂ ವಿಕೆಟ್ಗಳನ್ನು ಪಡೆಯುವ ಮೂಲಕ ಪಂದ್ಯವನ್ನು ಕೊನೆಯ ಎಸೆತದವರೆಗೆ ಕೊಂಡೊಯ್ದರು. ಹೀಗೆ ಪಡೆದ 5 ವಿಕೆಟ್ಗಳಲ್ಲಿ 4 ಬೌಲ್ಡ್ ಮೂಲಕ ಬಂದಿದ್ದು ಮತ್ತೊಂದು ವಿಶೇಷ.
ಆದರೆ, ಈ ಪಂದ್ಯದಲ್ಲಿ ಮಲಿಕ್ ಅದ್ಭುತ ಬೌಲಿಂಗ್ ದಾಳಿಯ ಹೊರತಾಗಿಯೂ ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ 195 ರನ್ಗಳ ಗುರಿಯನ್ನು ವೃದ್ಧಿಮಾನ್ ಸಹಾ(63) ಮತ್ತು ತೆವಾಟಿಯಾ ಹಾಗೂ ರಶೀದ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟನ್ಸ್ ಗೆಲುವು ಸಾಧಿಸಿತು.
"ಆತನ ಮುಂದಿರುವುದು ಭಾರತ ತಂಡ ಎಂದು ನಾನು ಭಾವಿಸುತ್ತೇನೆ. 11ರ ಬಳಗದಲ್ಲಿ ಆಡದಿರಬಹುದು, ಏಕೆಂದರೆ ಭಾರತ ತಂಡದಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಅವರನ್ನು ಹೊಂದಿದೆ. ಹಾಗಾಗಿ ಅವರಿಗೆ ಆಡುವ ಅವಕಾಶ ಇಲ್ಲದಿರಬಹುದು. ಆದರೆ ತಂಡದೊಂದಿಗೆ ಪ್ರಯಾಣಿಸುವ, ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಂತಹ ಆಟಗಾರರೊಂದಿಗೆ ಪ್ರಯಾಣಿಸುವುದು, ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಸಿಗುತ್ತದೆ, ನೋಡೋಣ ಇದು ನಡೆಯಬಹುದು " ಎಂದು ಗವಾಸ್ಕರ್ ತಿಳಿಸಿದ್ದಾರೆ.
ಉಮ್ರಾನ್ 15ನೇ ಆವೃತ್ತಿಯಲ್ಲಿ ನಿರಂತರ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು 15.93ರ ಸರಾಸರಿಯಲ್ಲಿ 15 ವಿಕೆಟ್ ಪಡೆದು 2ನೇ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:4 ಎಸೆತ 3 ಸಿಕ್ಸರ್! 'ಎರಡು ವರ್ಷಗಳ ಕಠಿಣ ಅಭ್ಯಾಸ ಫಲ ನೀಡಿತು'- ರಶೀದ್ ಖಾನ್