ನವದೆಹಲಿ: ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿದ್ದ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಇದೀಗ ಯುಎಇನಲ್ಲಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಂತಿಮ ನಿರ್ಧಾರ ಹೊರಹಾಕಿದೆ.
ಟಿ-20 ವಿಶ್ವಕಪ್ ಟೂರ್ನಮೆಂಟ್ ಯುಎಇನಲ್ಲಿ ಆಯೋಜನೆಗೊಂಡಿರುವ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟರ್ಸ್ ಹಿತದೃಷ್ಟಿಯಿಂದ ಯುಎಇನಲ್ಲಿ ಟೂರ್ನಿ ಆಡಿಸಲು ನಿರ್ಧರಿಸಲಾಗಿದೆ ಎಂದರು. ಮೆಗಾ ಟೂರ್ನಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಐಪಿಎಲ್ ಮುಕ್ತಾಯಗೊಳ್ಳುತ್ತಿದ್ದಂತೆ ವಿಶ್ವಕಪ್ ಆರಂಭಗೊಳ್ಳುವುದು ಎಂದರು.
ಸೆಪ್ಟೆಂಬರ್ 15ರಿಂದ ಐಪಿಎಲ್ನ ಎರಡನೇ ಇನ್ನಿಂಗ್ಸ್ ಆರಂಭಗೊಳ್ಳಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ. ಇದಾದ ಬಳಿಕ ವಿಶ್ವಕಪ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ನಾಲ್ಕು ಸ್ಥಳ ಗುರುತಿಸಲಾಗಿದೆ ಎಂದಿದ್ದಾರೆ. ಅಕ್ಟೋಬರ್ 17ರಿಂದ ಟೂರ್ನಿ ಆರಂಭ ಮಾಡಲಾಗುವುದು ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿ, ಇದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.
ಇದನ್ನೂ ಓದಿರಿ: T-20 World Cup: ಯುಎಇನಲ್ಲಿ ಟೂರ್ನಿ ನಡೆಸುವುದು ಖಚಿತ ಎಂದ ಶಾ
ಪ್ರಸಕ್ತ ಸಾಲಿನ ಟಿ - 20 ವಿಶ್ವಕಪ್ನಲ್ಲಿ 16 ತಂಡಗಳು ಭಾಗಿಯಾಗುತ್ತಿದ್ದು, ಎರಡು ವಿಭಾಗಗಳಲ್ಲಿ ಮ್ಯಾಚ್ ಆಡಿಸಲು ಐಸಿಸಿ ನಿರ್ಧರಿಸಿದೆ. ಶ್ರೀಲಂಕಾ, ಐರ್ಲೆಂಡ್, ಬಾಂಗ್ಲಾದೇಶ, ನೇದರ್ಲ್ಯಾಂಡ್, ಓಮನ್, ಸ್ಕ್ಯಾಟ್ಲ್ಯಾಂಡ್, ನಮೆಬಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ, ಇಂಗ್ಲೆಂಡ್, ಭಾರತ, ದಕ್ಷಿಣ ಆಪ್ರಿಕಾ, ಆಫ್ಘಾನಿಸ್ತಾನ ತಂಡಗಳು ಭಾಗಿಯಾಗುತ್ತಿವೆ.