ದುಬೈ: ಪಾಕಿಸ್ತಾನದ ವಿರುದ್ಧ ನಡೆದ ಐಸಿಸಿ ಟಿ-20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 10 ವಿಕೆಟ್ಗಳ ಸೋಲು ಕಂಡಿದೆ. ಈ ಮೂಲಕ ಟಿ-20 ವಿಶ್ವಕಪ್ನಲ್ಲಿ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭ ಮಾಡಿದೆ. ಭಾರತ ನೀಡಿದ್ದ 152ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ವಿಕೆಟ್ನಷ್ಟವಿಲ್ಲದೇ 17.5 ಓವರ್ಗಳಲ್ಲಿ ಟಾರ್ಗೆಟ್ ಮುಟ್ಟುವ ಮೂಲಕ ಗೆಲುವಿನ ನಗೆ ಬೀರಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕ್ ವಿರುದ್ಧ ಮೊದಲ ಬ್ಯಾಟಿಂಗ್ ನಡೆಸಿದ ಭಾರತ ಕ್ಯಾಪ್ಟನ್ ವಿರಾಟ್ ಕೊಹ್ಲಿ 57ರನ್ಗಳ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 151ರನ್ಗಳಿಕೆ ಮಾಡಿತು.
152 ರನ್ಗಳ ಗುರಿ ಬೆನ್ನತ್ತಿದ ಪಾಕ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ಬಾಬಾರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆರಂಭದಿಂದಲೂ ಭಾರತದ ಬೌಲರ್ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ಮೊದಲ 10 ಓವರ್ಗಳಲ್ಲಿ ವಿಕೆಟ್ನಷ್ಟವಿಲ್ಲದೆ 81ರನ್ಗಳಿಕೆ ಮಾಡಿತು.
ಬಾಬರ್-ರಿಜ್ವಾನ್ ಉತ್ತಮ ಶತಕದಾಟ
ಆರಂಭದಿಂದಲೂ ಎಚ್ಚರಿಕೆ ಆಟಕ್ಕೆ ಮೊರೆ ಹೊದ ಪಾಕಿಸ್ತಾನ ಪವರ್ ಪ್ಲೇ ಅಂತ್ಯಕ್ಕೆ ಯಾವುದೇ ವಿಕೆಟ್ನಷ್ಟವಿಲ್ಲದೆ 43ರನ್ಗಳಿಕೆ ಮಾಡಿತು. ಬಾಬರ್ ಹಾಗೂ ರಿಜ್ವಾನ್ ಉತ್ತಮ ಆಟ ಪ್ರದರ್ಶನ ತೋರಿದರು. ಈ ಜೋಡಿ ಮುರಿಯದ ಜೊತೆಯಾಟವಾಡಿ 152ರನ್ಗಳಿಕೆ ಮಾಡಿತು. ರಿಜ್ವಾನ್ ಅಜೇಯ 79ರನ್ ಹಾಗೂ ಬಾಬರ್ ಆಜಂ ಅಜೇಯ 68ರನ್ಗಳಿಕೆ ಮಾಡಿದರು. ಟೀಂ ಇಂಡಿಯಾ ಪರ ಯಾವುದೇ ಬೌಲರ್ ಕೂಡ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 151 ರನ್ ಗಳಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ 152 ರನ್ಗಳ ಟಾರ್ಗೆಟ್ ನೀಡಿತು.
ಆರಂಭದಲ್ಲೇ ಆಘಾತಕ್ಕೊಳಗಾದ ಭಾರತ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಓಪನರ್ ಆಗಿ ಕಣಕ್ಕಿಳಿದ ಕೆ. ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಡುವಲ್ಲಿ ಎಡವಿದರು. ಶಾಹೀನ್ ಅಫ್ರಿದಿ ಎಸೆದ ಮೊದಲ ಓವರ್ನಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೆ ರಾಹುಲ್ 3ನೇ ಓವರ್ನಲ್ಲಿ ಕೇವಲ 3 ರನ್ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.ನಂತರ ಒಂದಾದ ನಾಯಕ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಜೋಡಿ 25 ರನ್ಗಳ ಜೊತೆಯಾಟವಾಡಿತು. ಸೂರ್ಯ ಕುಮಾರ್ ಯಾದವ್ 11 ರನ್ಗಳಿಸಿ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಿಷಬ್ ಪಂತ್ ತಾಳ್ಮೆಯ ಆಟಕ್ಕೆ ಮುಂದಾದರು.
ಕೊಹ್ಲಿ-ಪಂತ್ ಜೊತೆಯಾಟ
ಕೊಹ್ಲಿ ಮತ್ತು ಪಂತ್ ಜೋಡಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಆಸರೆಯಾಯಿತು. ಪಂತ್ 39 ರನ್ಗಳಿಸಿದ್ದಾಗ ದೊಡ್ಡ ಹೊಡತಕ್ಕೆ ಮುಂದಾಗಿ ಶದಬ್ ಖಾನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರವೀಂದ್ರ ಜಡೆಜಾ 13 ರನ್ಗಳಿಸಿ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು.ಇನ್ನೂ ಕೇವಲ ಎರಡು ಓವರ್ ಉಳಿದಾಗ ಕ್ರೀಸ್ಗೆ ಬಂದ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಮಾಡಿ ರನ್ಗಳಿಸಿದರು. ಮತ್ತೊಮ್ಮ ಟೀಮ್ ಇಂಡಿಯಾಗೆ ಆಸರೆಯಾದ ನಾಯಕ ವಿರಾಟ್ ಕೊಹ್ಲಿ ಅಂತಿಮವಾಗಿ 57 ರನ್ಗಳಿಸುವ ಮೂಲಕ ತಂಡವನ್ನು 150ರ ಗಡಿಯತ್ತ ಕೊಂಡ್ಯೊಯ್ದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು.
ಇನ್ನ ಪಾಕ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಶಾಹೀನ್ ಅಫ್ರಿದಿ 3, ಹಸನ್ ಅಲಿ 2 ಮತ್ತು ಶದಬ್ ಖಾನ್ 1 ವಿಕೆಟ್ ಪಡೆದು ಮಿಂಚಿದರು.