ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯ ಮುಗಿದ ನಂತರ ಪ್ರತಿಕ್ರಿಯಿಸಿದ ಭಾರತ ಕ್ರಿಕೆಟ್ ದಂತಕಥೆ ಕಪಿಲ್ ದೇವ್, ಟೂರ್ನಿಯಲ್ಲಿ ಆರ್ ಅಶ್ವಿನ್ ಆಟದ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ.
‘‘ಆರ್ ಅಶ್ವಿನ್ ಅವರ ವಿಕೆಟ್ ಕಬಳಿಸುವ ಸಾಮರ್ಥ್ಯದ ಬಗ್ಗೆ ನನಗೆ ಇಲ್ಲಿಯವರೆಗೆ ಹೆಚ್ಚು ಆತ್ಮವಿಶ್ವಾಸ ಮೂಡಿಲ್ಲ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರು 22 ರನ್ನುಗಳಿಗೆ 3 ವಿಕೆಟ್ ಕಿತ್ತರು. ಆದ್ರೆ, ಅಂದು ಪಿಚ್‌ನಲ್ಲಿ ಚೆಂಡು ಪುಟಿದೇಳದ ಕಾರಣ ಅವರಿಗೆ ಆ ವಿಕೆಟ್‌ಗಳು ನಿರಾಯಾಸವಾಗಿ ಕೈ ಸೇರಿದವು. ಇದರಲ್ಲಿ ಅಶ್ವಿನ್ ಪಾತ್ರ ಹೆಚ್ಚೇನೂ ಇಲ್ಲ. ಅಲ್ಲದೇ, ಆ ವಿಕೆಟ್‌ಗಳನ್ನು ಅಶ್ವಿನ್ ಪಡೆದಿದ್ದಾರೆ ಎಂದು ನನಗೆ ಅನ್ನಿಸಲಿಲ್ಲ. ಈ ಪಂದ್ಯದಲ್ಲಿ ಪಡೆದ ಒಂದೆರಡು ವಿಕೆಟ್‌ಗಳ ಬಗ್ಗೆ ಹೇಳಲು ಸ್ವತ: ಅವರಿಗೇ ಮುಜುಗರ ಆಗುವಂತಿತ್ತು" ಎಂದು ಕಪಿಲ್ ದೇವ್ ವಿಶ್ಲೇಷಣೆ ಮಾಡಿದರು.
ಅನುಭವಿ ಆಶ್ವಿನ್ ಪ್ರಸಕ್ತ ವಿಶ್ವಕಪ್‌ನಲ್ಲಿ ಈವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದು 5 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಗಳಿಸದೆ ನಾಲ್ಕು ಓವರ್‌ಗಳಲ್ಲಿ 43 ರನ್ ನೀಡಿ ದುಬಾರಿಯಾಗಿದ್ದರು.
ಚಹಲ್ ಸಿಗುವುದೇ ಚಾನ್ಸ್?: ಇನ್ನೋರ್ವ ಅನುಭವಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ. ಈ ಅಂಶವನ್ನು ಪರಿಗಣಿಸಿದರೆ, ಸೆಮಿಫೈನಲ್ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸುವುದು ಅನುಮಾನ.
ಇದನ್ನೂ ಓದಿ: ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ತಯಾರಿ: ಅಭ್ಯಾಸದ ವೇಳೆ ರೋಹಿತ್ ಶರ್ಮಾ ಮುಂದೋಳಿಗೆ ಗಾಯ