ಲಂಡನ್: ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ವೆಂಟಿ-20 ಪಂದ್ಯಾವಳಿಗಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸೀರ್ ಹುಸೇನ್ ಆರೋಪಿಸಿದ್ದಾರೆ.
ಕೋವಿಡ್ ಭೀತಿಯಿಂದಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಅಂತಿಮ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಕೇವಲ ಎರಡು ತಾಸಿಗೂ ಮುನ್ನ ಪಂದ್ಯ ರದ್ದುಗೊಳಿಸಿರುವುದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಪಂದ್ಯವನ್ನು ಮತ್ತೊಮ್ಮೆ ಆಯೋಜಿಸಲು ಬಿಸಿಸಿಐ(BCCI) ಚಿಂತನೆ ನಡೆಸಿದೆ.
ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಕೋವಿಡ್‌ನಿಂದಾಗಿ ಯುಎಇಗೆ ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್ 19ರಂದು ಟೂರ್ನಿಯು ಪುನರಾರಂಭಗೊಳ್ಳಲಿದೆ. ಈ ಹಿನ್ನೆಲೆ ಆಟಗಾರರು ಕೋವಿಡ್ ಸೋಂಕು ತಗಲುವಂತಹ ಯಾವುದೇ ಅಪಾಯವನ್ನು ಆಹ್ವಾನಿಸಲು ಬಯಸುತ್ತಿಲ್ಲ. ಐಪಿಎಲ್‌ಗೆ ಆಟಗಾರರು ಅಲಭ್ಯವಾದರೆ ಬಿಸಿಸಿಐ ಆರ್ಥಿಕವಾಗಿ ಅಪಾರ ನಷ್ಟವನ್ನು ಅನುಭವಿಸಲಿದೆ ಎಂದೂ ಹುಸೇನ್ ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ-ದ.ಆಫ್ರಿಕಾ ಟಿ-20 ಸರಣಿ: ಮೊದಲ ಪಂದ್ಯ ಗೆದ್ದ ಹರಿಣಗಳ ತಂಡ
ಐದನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತದ ಜೂನಿಯರ್ ಫಿಸಿಯೊಗೆ ಕೋವಿಡ್ ದೃಢಪಟ್ಟಿತ್ತು. ಈ ಬೆನ್ನಲ್ಲೇ ಭಾರತೀಯ ಆಟಗಾರರ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿತ್ತು. ಆದರೂ, ಇನ್‌ಕ್ಯುಬೇಷನ್ ಅವಧಿಯಲ್ಲಿ ಸೋಂಕು ಮತ್ತೆ ದೃಢಪಟ್ಟರೆ ಆಟಗಾರರ ಅಭಾವವನ್ನು ಎದುರಿಸಲಿದೆ.