ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟಿ20 (Mushtaq Ali Trophy) ಟ್ರೋಫಿಯಲ್ಲಿ ಬೆಂಗಾಲ್ ವಿರುದ್ಧ ಕ್ವಾರ್ಟರ್ ಫೈನಲ್ಸ್ ಪಂದ್ಯದ ಸೂಪರ್ ಓವರ್ನಲ್ಲಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿತು.
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಕರುಣ್ ನಾಯರ್ (58), ಮನೀಶ್ ಪಾಂಡೆ (29) ಮತ್ತು ರೋಹನ್ ಕದಮ್ (30) ರನ್ಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 160 ರನ್ಗಳಿಸಿತ್ತು.
ಬೆಂಗಾಲ್ ಪರ ಮುಕೇಶ್ ಕುಮಾರ್ 34/1, ಅಕಾಶ್ ದೀಪ್ 23/1, ಸಯಾನ್ ದೀಪ್ 27/1, ವೃತಿಕ್ ಚಟರ್ಜಿ 23/1 ಮತ್ತು ಶಹ್ಬಾಜ್ ಅಹ್ಮದ್ 36/1 ವಿಕೆಟ್ ಪಡೆದರು.
161 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಾಲ್ ತಂಡ ಕೂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.
ವೃತಿಕ್ ಚಟರ್ಜಿ 40 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 51, ರಿತ್ವಿಕ್ ಚೌಧರಿ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಸಹಿತ 36 ರನ್ಗಳಿಸಿದರು.
ಕೊನೆಯ ಓವರ್ನಲ್ಲಿ ಬೆಂಗಾಲ್ ಗೆಲ್ಲಲು 20 ರನ್ ಅಗತ್ಯವಿತ್ತು. ವಿದ್ಯಾಧರ್ ಪಾಟೀಲ್ ಎಸೆದ ಆ ಓವರ್ನಲ್ಲಿ ಮೊದಲ 5 ಎಸೆತಗಳಲ್ಲಿ ಚೌಧರಿ ಮತ್ತು ಆಕಾಶ್ ದೀಪ್ ಜೋಡಿ 19 ರನ್ಗಳಿಸಿದ್ದು, ಕೊನೆಯ ಎಸೆತದಲ್ಲಿ ಸಿಂಗಲ್ ಅಗತ್ಯವಿತ್ತು. ಆದರೆ ಮನೀಶ್ ಪಾಂಡೆ ಡೈರೆಕ್ಟ್ ಹಿಟ್ ಮಾಡಿ ಅಕಾಶ್ ದೀಪ್ರನ್ನು ರನ್ಔಟ್ ಮಾಡಿ ಪಂದ್ಯವನ್ನು ಟೈ ಮಾಡಿದರು.
ಗೆಲುವಿಗಾಗಿ ನಡೆದ ಸೂಪರ್ ಓವರ್ನಲ್ಲಿ ಕರ್ನಾಟಕ ಪರ ಕೆ.ಸಿ.ಕಾರಿಯಪ್ಪ ಕೇವಲ 5 ರನ್ ಬಿಟ್ಟುಕೊಟ್ಟರು. ಬೆಂಗಾಲ್ ಕೇವಲ 4 ಎಸೆತಗಳನ್ನಾಡಿ 2 ವಿಕೆಟ್ ಕಳೆದುಕೊಂಡಿತು. ಕೇವಲ 6 ರನ್ಗಳ ಗುರಿ ಪಡೆದ ಕರ್ನಾಟಕ ಕೇವಲ 2 ಎಸೆತಗಳಲ್ಲಿ ಜಯ ಸಾಧಿಸಿತು. ಮನೀಶ್ ಪಾಂಡೆ ಮೊದಲ ಎಸೆತದಲ್ಲಿ 2 ರನ್ ಮತ್ತು 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಸೆಮಿಫೈನಲ್ಗೆ ಕೊಂಡೊಯ್ದರು.
ಕರ್ನಾಟಕ ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಪ್ಲೇಟ್ ಗುಂಪಿಗೆ ಹಿಂಬಡ್ತಿ ಪಡೆದಿದ್ದ ವಿದರ್ಭ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಮತ್ತು ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಇದನ್ನೂ ಓದಿ:ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್