ಸಿಡ್ನಿ(ಆಸ್ಟ್ರೇಲಿಯಾ): ಬಿಗ್ ಬ್ಯಾಶ್ ಲೀಗ್ ನಡೆಯುತ್ತಿದ್ದು, ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಸಿಡ್ನಿ ಥಂಡರ್ಸ್ ಕೇವಲ 15 ರನ್ಗೆ ಆಲೌಟ್ ಆಗಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಕೆಟ್ಟ ದಾಖಲೆ ಬರೆದಿದೆ.
ಸಿಡ್ನಿ ಶೋಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ಪರವಾಗಿ ಕ್ರಿಸ್ ಲಿನ್ 27 ಎಸೆತಗಳಲ್ಲಿ 4 ಬೌಂಡರಿ, ಒಂದು ಸಿಕ್ಸರ್‌ಸಮೇತ 36 ರನ್ ಕಲೆಹಾಕಿದರೆ, ಗ್ರಾಂಡ್ಹೋಮ್ 24 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಸಮೇತ 33 ರನ್ ಬಾರಿಸುವ ಮೂಲಕ 9 ವಿಕೇಟ್ ನಷ್ಟಕ್ಕೆ 20 ಓವರ್ಗಳಲ್ಲಿ 139 ರನ್ಗಳನ್ನು ಕಲೆಹಾಕಿ ಸಾಧಾರಣ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಸಿಡ್ನಿ ಥಂಡರ್ಸ್ ಅಡಿಲೇಡ್ ಸ್ಟ್ರೈಕರ್ಸ್ ಬೌಲರ್ಗಳ ಮಾರಕ ದಾಳಿಗೆ ಕೇವಲ 15 ರನ್ಗಳಿಸುವಷ್ಟರಲ್ಲಿ ಸರ್ವಪತನ ಕಂಡಿದೆ.
ಸಿಡ್ನಿ ಥಂಡರ್ಸ್ ಪರ ಕ್ರೀಸ್ಗಿಳಿದ ಬ್ಯಾಟರ್ಗಳು ಹೆಚ್ಚು ಕಾಲ ಕ್ರೀಸ್ನಲ್ಲಿ ಉಳಿಯದೇ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ನತ್ತ ಮುಖ ಮಾಡಿದರು. ಅಡಿಲೇಡ್ ಪರ ಹೆನ್ರಿ ತಾರ್ತನ್ ಹಾಗೂ ವೇಸ್ ಅಗರ್ ಮಾರಕ ಬೌಲಿಂಗ್ ದಾಳಿ ನಡೆಸಿ ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್ಗಳನ್ನು ಕಿತ್ತು ಪವರ್ ಪ್ಲೇ ಮುಗಿಯವಷ್ಟರಲ್ಲೇ ಪಂದ್ಯ ಮುಗಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಅಡಿಲೇಡ್ 124 ರನ್ಗಳ ದೊಡ್ಡ ಗೆಲುವು ಸಾಧಿಸಿತು.
ಸಿಡ್ನಿ ಥಂಡರ್ನಲ್ಲಿ ಇಂಗ್ಲೆಂಡ್ನ ಸ್ಟಾರ್ ಆಟಗಾರ ಅಲೆಕ್ಸ್ ಹೇಲ್ಸ್ ಸೇರಿದಂತೆ ಒಟ್ಟು 5 ಆಟಗಾರರು ಶೂನ್ಯಕ್ಕೆ ಔಟ್ ಆಗಿದ್ದಾರೆ. ಬ್ರೆಂಡನ್ ಡಗ್ಗೆಟ್ 4 ರನ್ ಕಲೆಹಾಕುವ ಮೂಲಕ ತಂಡದ ಹೈ ಸ್ಕೋರರ್ ಆಗಿದ್ದಾರೆ.
T20 ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡಗಳ ಪಟ್ಟಿ:
15 - ಸಿಡ್ನಿ ಥಂಡರ್ ವಿರುದ್ಧ ಅಡಿಲೇಡ್ ಸ್ಟ್ರೈಕರ್ಸ್ (2022)
21 - ಟರ್ಕಿ ವಿರುದ್ಧ ಜೆಕ್ ರಿಪಬ್ಲಿಕ್, 2019
26 - ಲೆಸೊಥೊ ವಿರುದ್ಧ ಉಗಾಂಡಾ, 2021
28 - ಟರ್ಕಿ ವಿರುದ್ಧ ಲಕ್ಸೆಂಬರ್ಗ್, 2019
30 - ಥೈಲ್ಯಾಂಡ್ ವಿರುದ್ಧ ಮಲೇಷ್ಯಾ, 2022
ಇದನ್ನೂ ಓದಿ: Ind Vs Ban 1st Test: ಗಿಲ್, ಪೂಜಾರ ಶತಕ; ಬಾಂಗ್ಲಾ ಗೆಲುವಿಗೆ 513 ರನ್ ಬೃಹತ್ ಟಾರ್ಗೆಟ್