ನವದೆಹಲಿ: ಕೈಬೆರಳಿನ ಮುರಿತಕ್ಕೆ ಒಳಗಾಗಿ ಸಂಪೂರ್ಣ ಚೇತರಿಸಿಕೊಳ್ಳದ ಸೂರ್ಯಕುಮಾರ್ ಯಾದವ್ ಮಾರ್ಚ್ 27ರಂದು ಡೆಲ್ಲಿ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿರುವ ನಾಲ್ವರು ಆಟಗಾರರಲ್ಲಿ ಒಬ್ಬರಾಗಿರುವ ಸೂರ್ಯಕುಮಾರ್, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ವೇಳೆ ಗಾಯಗೊಂಡು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಎನ್ಸಿಎನಲ್ಲಿ ಪುನಶ್ಚೇತನ ತರಬೇತಿಯಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಮೊದಲ ಪಂದ್ಯದಲ್ಲಿ ಮುಂಬೈನ ಪರ ಆಡುವುದು ಕಠಿಣವಾಗಬಹುದು ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ಮಾಹಿತಿ ನೀಡಿವೆ.
ಹಾಗಾಗಿ, ಅವರಿಗೆ ತಂಡದ ವೈದ್ಯಕೀಯ ಮಂಡಳಿ ಆರಂಭಿಕ ಪಂದ್ಯದಲ್ಲಿ ಆಡುವುದು ಬೇಡ ಎಂದು ಸಲಹೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಮತ್ತು 15.25 ಕೋಟಿ ರೂ. ಬೆಲೆಯ ಇಶಾನ್ ಕಿಶನ್ ಹೊರತುಪಡಿಸಿದರೆ, ಸೂರ್ಯಕುಮಾರ್ ಯಾದವ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ.
ಹಾಗಾಗಿ, ಟೂರ್ನಿಯಲ್ಲಿ ಅವರ ಸೇವೆ ತಂಡಕ್ಕೆ ಪ್ರಮುಖವಾಗಿರುವುದರಿಂದ ಯಾವುದೇ ಅಪಾಯ ತಂದುಕೊಳ್ಳಲು ಬಯಸಲ್ಲ. ಆದರೆ, 5 ಬಾರಿಯ ಚಾಂಪಿಯನ್ ತಂಡಕ್ಕೆ ಸೂರ್ಯ 2ನೇ ಪಂದ್ಯದಿಂದ ಶೇ.100 ಫಿಟ್ನೆಸ್ನೊಂದಿಗೆ ಲಭ್ಯರಾಗಲಿದ್ದಾರೆ.
ಇದನ್ನೂ ಓದಿ:ಡಿಆರ್ಎಸ್ ಸೇರಿದಂತೆ ಈ ಬಾರಿ ಐಪಿಎಲ್ನಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ