ಮುಂಬೈ: ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮರಳಿದ ನಂತರವೂ ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕದಲ್ಲೇ ಆಡಬೇಕೆಂದು ಟೀಮ್ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 62 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮುಂಬೈ ಬ್ಯಾಟರ್ ಪರ ಗಂಭೀರ್ ಬ್ಯಾಟಿಂಗ್ ಮಾಡಿದ್ದು, ವಿರಾಟ್ ವಿಶ್ರಾಂತಿ ಮುಗಿಸಿ ಮತ್ತೆ ಟಿ20 ತಂಡಕ್ಕೆ ಮರಳಿದ ನಂತರವೂ ಸೂರ್ಯ ಕುಮಾರ್ 3ರಲ್ಲೇ ಮುಂದುವರಿದರೆ ತಂಡಕ್ಕೆ ಅನುಕೂಲ ಎಂದಿದ್ದಾರೆ.
ಸೂರ್ಯಕುಮಾರ್ 3ನೇ ಕ್ರಮಾಂಕದಲ್ಲಿ ಆಡಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಅವರು ಸ್ಪಿನ್ಗೆ ಅತ್ಯುತ್ತಮವಾಗಿ ಆಡುತ್ತಾರೆ. ಕ್ರಿಕೆಟ್ನ ಎಲ್ಲಾ ಶಾಟ್ಗಳನ್ನು ಪ್ರಯೋಗಿಸಬಲ್ಲರು. ಅವರೊಬ್ಬರು 360 ಡಿಗ್ರಿ ಬ್ಯಾಟರ್ ಕೂಡ. ಇದೇ ಕಾರಣಕ್ಕೆ ಅವರಿಗೆ ಬೌಲಿಂಗ್ ಮಾಡಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ವಿರಾಟ್ ಕೊಹ್ಲಿ ಮರಳಿದರೂ, ನಾನು ಈತನನ್ನೇ 3ನೇ ಕ್ರಮಾಂಕದಲ್ಲಿ ನೋಡಲು ಬಯಸುತ್ತೇನೆ. ವಿರಾಟ್ 4ರಲ್ಲಿ ಆಡಲಿ ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
ಆರಂಭಿಕರಾದ ರೋಹಿತ್ ಮತ್ತು ಕೆ.ಎಲ್.ರಾಹುಲ್ ಸ್ಪೋಟಕ ಬ್ಯಾಟಿಂಗ್ ಮಾಡಬಲ್ಲರು. ಅವರಿಬ್ಬರು ನೀಡುವ ವೇಗವನ್ನು ಮುಂದುವರಿಸಿಕೊಂಡು ಹೋಗಲು ಸೂರ್ಯಕುಮಾರ್ 3ನೇ ಕ್ರಮಾಂಕಕ್ಕೆ ಸೂಕ್ತವಾದ ಬ್ಯಾಟರ್. ಆಸ್ಟ್ರೇಲಿಯಾ ತಂಡದಲ್ಲಿ ಸ್ಮಿತ್ ನಿರ್ವಹಿಸುವ ಆ್ಯಂಕರ್ ಜವಾಬ್ದಾರಿಯನ್ನು ಕೊಹ್ಲಿ 4ರಲ್ಲಿ ನಿರ್ವಹಿಸಲಿ. ಇದರಿಂದ ಪಂತ್, ವೆಂಕಟೇಶ್ ಅಯ್ಯರ್ ಅಂತಹ ಅನನುಭವಿಗಳಿಂದ ಕೂಡಿರುವ ಮಧ್ಯಮ ಕ್ರಮಾಂಕ ಕೂಡ ಬಲಿಷ್ಠವಾಗಲಿದೆ ಎಂದು ಮಾಜಿ ಆರಂಭಿಕ ಬ್ಯಾಟರ್ ಹೇಳುತ್ತಾರೆ.
ಇದನ್ನೂ ಓದಿ:IND vs NZ 2nd T20I: ರಾಂಚಿಯಲ್ಲಿ ಕಿವೀಸ್ ಮಣಿಸಿ ಸರಣಿ ಗೆಲ್ಲುವ ವಿಶ್ವಾಸದಲ್ಲಿ ರೋಹಿತ್ ಪಡೆ