ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನಿಯಮಾವಳಿ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಹೀಗಾಗಿ, ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಮುಂದಿನ 3 ವರ್ಷಗಳ ಕಾಲ ತಮ್ಮ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.
ಪ್ರಕರಣದ ವಿವರ: ಬಿಸಿಸಿಐ ಪದಾಧಿಕಾರಿಗಳ ಅಧಿಕಾರವನ್ನು ವಿಸ್ತರಿಸಲು ಬಿಸಿಸಿಐ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಇದನ್ನು ಮಾನ್ಯ ಮಾಡಬೇಕೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ 2020 ರಲ್ಲಿ ಅರ್ಜಿ ಸಲ್ಲಿಸಿತ್ತು. ಬಿಸಿಸಿಐ ಸಂವಿಧಾನದ ನಿಯಮಗಳ ಪ್ರಕಾರ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಖಜಾಂಚಿ, ಜಂಟಿ ಕಾರ್ಯದರ್ಶಿಗಳು ಒಮ್ಮೆ 6 ವರ್ಷಗಳ ಕಾಲ ರಾಜ್ಯ, ರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದರೆ, ಮುಂದಿನ 3 ವರ್ಷಗಳ ಕಾಲ ಬಿಸಿಸಿಐನಲ್ಲಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಲು ಅನುಮತಿಯಿಲ್ಲ. ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರವಧಿಯನ್ನು ವಿಸ್ತರಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಇದನ್ನೂ ಓದಿ: ಬಿಸಿಸಿಐ ಪದಾಧಿಕಾರಿಗಳ ಅಧಿಕಾರವಧಿ ವಿಸ್ತರಣೆ ಅರ್ಜಿ.. ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ, ಪದಾಧಿಕಾರಿಗಳು ಸತತ 12 ವರ್ಷ ಅಧಿಕಾರ ನಿರ್ವಹಿಸಬಹುದು. ಈ ಹಿಂದಿನಂತೆ ಕೂಲಿಂಗ್ ಆಫ್ ನಿಯಮ ಕಡ್ಡಾಯವಲ್ಲ ಎಂದಿದೆ. ಈ ತೀರ್ಪಿನಿಂದಾಗಿ ಗಂಗೂಲಿ ಹಾಗೂ ಜಯ್ ಶಾ 2025ರವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ವಿಶೇಷವೆಂದರೆ, ಸೌರವ್ ಗಂಗೂಲಿ ಈಗಾಗಲೇ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಹಾಗೂ ಜಯ್ ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗಿ ನಾಲ್ಕು ವರ್ಷಕ್ಕೂ ಅಧಿಕ ಅವಧಿಗೆ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ, ಈ ಸೆಪ್ಟೆಂಬರ್ ತಿಂಗಳಲ್ಲಿ ಅವರ ಅಧಿಕಾರವಧಿ ಮುಕ್ತಾಯಗೊಳ್ಳುತಿತ್ತು.
ಬಿಸಿಸಿಐ ಸಂವಿಧಾನದ ಪ್ರಕಾರ, ಒಬ್ಬ ಪದಾಧಿಕಾರಿಯು ರಾಜ್ಯ ಅಸೋಸಿಯೇಷನ್ ಅಥವಾ ಬಿಸಿಸಿಐ ಅಥವಾ ಎರಡೂ ಜಂಟಿಯಾಗಿ ಸತತ ಎರಡು ಅವಧಿಗಳ ನಡುವೆ ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಗೆ ಒಳಗಾಗಬೇಕಿದೆ.