ಕೊಲಂಬೊ: ಆರ್.ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಲಂಕಾ ಸ್ಪಿನ್ನರ್ಸ್ ಮೇಲುಗೈ ಸಾಧಿಸಿದರು. ಹೀಗಾಗಿ, ಟೀಂ ಇಂಡಿಯಾ 43.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 225 ರನ್ಗಳಿಕೆ ಮಾಡಿದೆ. ಡಕವರ್ತ್ ಲೂಯಿಸ್ ಪ್ರಕಾರ ಲಂಕಾ ತಂಡಕ್ಕೆ 227 ರನ್ಗಳ ಗೆಲುವಿನ ಟಾರ್ಗೆಟ್ ನೀಡಲಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲೇ ಕ್ಯಾಪ್ಟನ್ ಶಿಖರ್ ಧವನ್(13) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಪೃಥ್ವಿ ಶಾ ಹಾಗೂ ಸಂಜು ಸ್ಯಾಮ್ಸನ್ ತಂಡಕ್ಕೆ ಭದ್ರ ಬುನಾದಿ ಹಾಕಿದರು. 80 ರನ್ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶನಕ್ ಯಶಸ್ವಿಯಾದರು. 49 ರನ್ಗಳಿಕೆ ಮಾಡಿದ್ದ ಪೃಥ್ವಿ ಶಾ ಎಲ್ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಸ್ಯಾಮ್ಸನ್ ಕೂಡ 46ರನ್ಗಳಿಸಿದ್ದಾಗ ಫರ್ನಾಡೋ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ನಾಳೆ ಭಾರತದ ಸ್ಪರ್ಧಿಗಳಿಗೆ ಎದುರಾಗುವ ಸವಾಲೇನು? ಇಲ್ಲಿದೆ ಮಾಹಿತಿ..
ಇದಾದ ಬಳಿಕ ಮನೀಷ್ ಪಾಂಡೆ 11 ರನ್ಗಳಿಕೆ ಮಾಡಿ ಕ್ಯಾಚ್ ನೀಡಿ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಆದರೆ ಸೂರ್ಯಕುಮಾರ್ ಯಾದವ್ 40 ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ 19ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯದಾಗಿ ನಿತೀಶ್ ರಾಣಾ 7ರನ್, ಕೆ. ಗೌತಮ್ 2ರನ್, ಚಹಾರ್ 13ರನ್ ಸೈನಿ 15 ರನ್ಗಳಿಕೆ ಮಾಡಿದರು.
ಲಂಕಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಧನಂಜಯ ಹಾಗೂ ಜಯವಿಕ್ರಂ ತಲಾ 3ವಿಕೆಟ್ ಪಡೆದುಕೊಂಡರೆ, ಚಮೀರಾ ಎರಡು ಹಾಗೂ ಶನಕ್ ಮತ್ತು ಕರುಣರತ್ನೆ ತಲಾ 1ವಿಕೆಟ್ ಪಡೆದು ಗಮನ ಸೆಳೆದರು.
ಪಂದ್ಯದ ಅರ್ಧದಲ್ಲಿ ಮಳೆ ಸುರಿದ ಕಾರಣ 47 ಓವರ್ಗಳ ಆಟ ನಡೆಸಲು ನಿರ್ಧರಿಸಲಾಗಿದ್ದು, ಇದೀಗ ಲಂಕಾ ತಂಡಕ್ಕೆ 227ರನ್ಗಳ ಗೆಲುವಿಗೆ ರನ್ ಟಾರ್ಗೆಟ್ ನೀಡಲಾಗಿದೆ.