ಮುಂಬೈ : ಈ ಋತುವಿನ ಐಪಿಎಲ್ ಹಾರ್ದಿಕ್ ಪಾಂಡ್ಯಾರ ಅದೃಷ್ಟವನ್ನೇ ಬದಲಿಸಿದೆ. ಗುಜರಾತ್ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್, ತಂಡವನ್ನು ಅಗ್ರಸ್ಥಾನದಲ್ಲಿರಿಸಿದ್ದಾರೆ. ಅಲ್ಲದೇ, ಅತಿ ಹೆಚ್ಚು ರನ್ ಬಾರಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಹೊಸ ತಂಡದ ನಾಯಕನಾಗಿರುವ ಪಾಂಡ್ಯಾ ಮೈದಾನದಲ್ಲಿ ತಾವು ತೆಗೆದುಕೊಳ್ಳುವ ಧೈರ್ಯದ ನಿರ್ಧಾರಗಳಿಂದ ಯಶಸ್ಸು ಸಾಧಿಸುತ್ತಿದ್ದಾರೆ.
ರಾಜಸ್ತಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 37 ರನ್ಗಳ ಜಯ ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯಾರ ನಾಯಕತ್ವದ ಬಗ್ಗೆ ಮೆಚ್ಚುಗೆ ಸೂಚಿಸಿರುವ ತಂಡದ ಸಹ ಆಟಗಾರ, ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಪಾಂಡ್ಯಾ ಮೈದಾನದ ಹೊರಗೂ, ಒಳಗೂ ದಿಟ್ಟ ನಿರ್ಧಾರವನ್ನು ಕೈಗೊಳ್ಳುವುದರಲ್ಲಿ ಹಿಂಜರಿಯುವುದಿಲ್ಲ. ಅವರ ನಿರ್ಧಾರಗಳೇ ತಂಡದ ಯಶಸ್ಸಿಗೆ ಕಾರಣವಾಗಿವೆ. ತಂಡದಲ್ಲಿ ಅವರು ಸೃಷ್ಟಿಸಿದ ವಾತಾವರಣ ವಿಭಿನ್ನವಾಗಿದೆ ಎಂದು ಹೊಗಳಿದ್ದಾರೆ.
ದಿಟ್ಟ ನಿರ್ಧಾರದಿಂದ ತಂಡಕ್ಕೆ ಬಲ : ತಂಡದ ಪ್ರತಿ ಆಟಗಾರನಲ್ಲಿ ಸ್ಫೂರ್ತಿ ತುಂಬುತ್ತಾರೆ. ಪಾಂಡ್ಯಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ಏನು ಮಾಡಬೇಕು ಎಂಬ ಬಗ್ಗೆ ಮನಸ್ಸಿನಲ್ಲಿ ಸ್ಪಷ್ಟ ನಿರ್ಧಾರ ಹೊಂದಿರುವ ವ್ಯಕ್ತಿ ಆಗಿದ್ದಾರೆ. ಒಂದು ತಂಡದ ನಾಯಕನಿಗೆ ಇದು ಬಹುಮುಖ್ಯವಾಗಿದೆ. ನಾಯಕನ ನಿರ್ಧಾರಗಳೇ ತಂಡದ ಗೆಲುವಿಗೂ ಕಾರಣವಾಗುತ್ತದೆ ಎಂದು ರಶೀದ್ ಖಾನ್ ಹೇಳಿದ್ದಾರೆ.
ತಂಡದ ನಾಯಕನ ಗುರಿ ಸ್ಪಷ್ಟವಾಗಿದ್ದಾಗ ಮಾತ್ರ ಗೆಲುವು ಆ ತಂಡದ್ದಾಗಲಿದೆ. ಅದನ್ನು ಹಾರ್ದಿಕ್ ಪಾಂಡ್ಯಾ ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿದೆ. ಇದು ಉತ್ತಮ ನಾಯಕನಾಗಿ ರೂಪುಗೊಳ್ಳುವ ಬಗೆ ಎಂದು ಹಾರ್ದಿಕ್ ನಾಯಕತ್ವದ ಬಗ್ಗೆ ಆಫ್ಘನ್ ಸ್ಪಿನ್ನರ್ ಕೊಂಡಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ಬ್ಯಾಕ್ : ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಳಪೆ ಆಟದಿಂದಾಗಿ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯಾ, ಐಪಿಎಲ್ನಲ್ಲಿ ಮುಂಬೈ ಪರ ಆಡುತ್ತಿದ್ದಾಗಲೂ ಬೌಲಿಂಗ್ ಮಾಡುವುದನ್ನೂ ನಿಲ್ಲಿಸಿದ್ದರು. ಈ ಋತುವಿನ ಐಪಿಎಲ್ನಲ್ಲಿ ಹೊಸ ತಂಡವಾಗಿ ಸೇರ್ಪಡೆಯಾದ ಗುಜರಾತ್ ಟೈಟಾನ್ಸ್ ಹಾರ್ದಿಕ್ಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ಬಳಿಕ ಪಾಂಡ್ಯಾ ಬ್ಯಾಟಿಂಗ್ನಲ್ಲಿ ರಾರಾಜಿಸುತ್ತಿದ್ದು, ಬೌಲಿಂಗ್ನಲ್ಲೂ ಮಿಂಚುತ್ತಿದ್ದಾರೆ. ಈ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ಬ್ಯಾಕ್ ಮಾಡಲು ತಾನು ಸಿದ್ಧ ಎಂದು ತೋರಿಸಿದ್ದಾರೆ.
ಓದಿ: ನೋಡಿ: ವಯಸ್ಸಲ್ಲಿ ಹಿರಿಯನಾದ್ರೂ 'ಕ್ರಿಕೆಟ್ ದೇವರ' ಪಾದಮುಟ್ಟಿ ನಮಿಸಿದ ಶ್ರೇಷ್ಠ ಕ್ರಿಕೆಟಿಗ!