ಲಾರ್ಡ್ಸ್(ಇಂಗ್ಲೆಂಡ್): ಆತಿಥೇಯ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅಬ್ಬರಿಸಿದ ಹರಿಣಗಳ ತಂಡ ಕೇವಲ ಎರಡೂವರೆ ದಿನದಲ್ಲಿ ಪಂದ್ಯವನ್ನು ಗೆದ್ದು ಬೀಗಿದೆ. ಈ ಮೂಲಕ ತವರು ನೆಲದಲ್ಲಿ ಬೆನ್ಸ್ಟೋಕ್ಸ್ ಬಳಗ ಮುಖಭಂಗ ಅನುಭವಿಸಿದೆ.
ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಆಫ್ರಿಕಾ ಮಾರಕ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋಯಿತು. ಈ ಮೂಲಕ 45 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 165 ರನ್ಗಳಿಕೆ ಮಾಡಿ, ಆಲೌಟ್ ಆಯಿತು. ತಂಡದ ಪರ ಒಲೆ ಪೊಪ್ 73ರನ್ಗಳಿಸಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಉಳಿದಂತೆ ರೂಟ್, ಬೈರ್ಸ್ಟೋ, ಸ್ಟೋಕ್ಸ್, ಕ್ರಾಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ರಬಾಡಾ 5 ವಿಕೆಟ್ ಪಡೆದು ಮಿಂಚಿದರೆ, ನಾರ್ಟ್ಜೆ 3 ಹಾಗೂ ಜಾನ್ಸನ್ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ T20, ODI ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ, ಕಿರಣ್ಗೆ ಚೊಚ್ಚಲ ಬುಲಾವ್
165ರನ್ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 326 ರನ್ಗಳಿಕೆ ಮಾಡಿತು. ತಂಡದ ಪರ ಎಲ್ಗರ್ 47, ಇರ್ವೆ 73, ಜಾನ್ಸನ್ 48 ಹಾಗೂ ಮಹಾರಾಜ್ 41 ರನ್ಗಳಿಕೆ ಮಾಡಿದರು. ಈ ಮೂಲಕ ತಂಡ 161ರನ್ಗಳ ಮುನ್ನಡೆ ಪಡೆದುಕೊಂಡಿತು.
ಎರಡನೇ ಇನ್ನಿಂಗ್ಸ್ನಲ್ಲೂ ಇಂಗ್ಲೆಂಡ್ ವೈಫಲ್ಯ: 161ರನ್ಗಳ ಹಿನ್ನಡೆಯೊಂದಿಗೆ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿತು. ಇಲ್ಲೂ ವೈಫಲ್ಯ ಅನುಭವಿಸಿ 37.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 149 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಇನ್ನಿಂಗ್ಸ್ ಹಾಗೂ 12ರನ್ಗಳ ಗೆಲುವು ದಾಖಲು ಮಾಡಿದೆ. ತಂಡದ ಪರ ಮಿಂಚಿದ ದಕ್ಷಿಣ ಆಫ್ರಿಕಾ ಬೌಲರ್ ರಬಾಡಾ, ಮಹಾರಾಜ್, ಜಾನ್ಸನ್ ತಲಾ 2 ವಿಕೆಟ್ ಪಡೆದುಕೊಂಡರೆ, ನಾರ್ಟ್ಜೆ 3 ಹಾಗೂ ನಿಗ್ಡಿ 1 ವಿಕೆಟ್ ಕಿತ್ತರು.
ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಆಫ್ರಿಕಾ ಮೊದನೇ ಸ್ಥಾನದಲ್ಲಿ ಮುಂದುವರೆದಿದೆ. ಸೋತಿರುವ ಇಂಗ್ಲೆಂಡ್ ಸದ್ಯ 7ನೇ ಸ್ಥಾನದಲ್ಲಿದ್ದು, ಫೈನಲ್ನಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಅನುಮಾನ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಶ್ರೀಲಂಕಾ 3 ಹಾಗೂ ಭಾರತ 4ನೇ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 25ರಿಂದ ಮ್ಯಾಂಚೆಸ್ಟರ್ನಲ್ಲಿ ಆರಂಭಗೊಳ್ಳಲಿದೆ.