ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ಪ್ರತಿಭಾನ್ವಿತ ರಜತ್ ಪಾಟಿದಾರ್ ಮತ್ತು 6ನೇ ಸ್ಥಾನದ ಡೇರಿಂಗ್ ಬ್ಯಾಟರ್ ರಿಂಕು ಸಿಂಗ್ ಎರಡನೇ ಏಕದಿನ ಪಂದ್ಯದಲ್ಲಿ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ನಾಯಕ ಕೆ ಎಲ್ ರಾಹುಲ್ ಸರಣಿ ವಶ ಪಡಿಸಿಕೊಳ್ಳಲು ತಂತ್ರವನ್ನು ರೂಪಿಸುತ್ತಿದ್ದಾರೆ. ಹರಿಣಗಳ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವೇಗಿಗಳಾದ ಅರ್ಶದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅವರ ಬೌಲಿಂಗ್ ನೆರವಿನಿಂದ ಭಾರತ 8 ವಿಕೆಟ್ಗಳ ಗೆಲುವು ಸಾಧಿಸಿತು. 2022ರಲ್ಲಿ ರಾಹುಲ್ ನಾಯಕತ್ವದಲ್ಲಿ ಭಾರತ ಕ್ಲೀನ್ ಸ್ವೀಪ್ಗೆ ಒಳಗಾಗಿತ್ತು. ಈಗ ಆ ಸೇಡನ್ನು ತೀರಿಸಿಕೊಳ್ಳಲು ರಾಹುಲ್ ಹವಣಿಸುತ್ತಿದ್ದಾರೆ.
ಹರಿಣಗಳ ವಿರುದ್ಧ 'ಬಾಕ್ಸಿಂಗ್ ಡೇ' ಯಂದು ಆರಂಭವಾಗಲಿರುವ ಟೆಸ್ಟ್ ಪಂದ್ಯಗಳ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಮೊದಲ ಪಂದ್ಯದ ನಂತರ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡದೊಂದಿಗೆ ಸೇರಿಕೊಂಡು ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ತೆರವಾದ ಅಯ್ಯರ್ ಜಾಗಕ್ಕೆ ಯಾವ ಆಟಗಾರನಿಗೆ ಅವಕಾಶ ಸಿಗಲಿದೆ ಮತ್ತು ಯಾರು ಪದಾರ್ಪಣೆ ಪಂದ್ಯವನ್ನು ಆಡಲಿದ್ದಾರೆ ಎಂಬುದು ಟಾಸ್ ನಂತರ ತಿಳಿಯಲಿದೆ.
ಐರ್ಲೆಂಡ್ ಸರಣಿಯ ನಂತರ ಅಂತಾರಾಷ್ಟ್ರೀಯ ಟಿ20 ತಂಡಕ್ಕೆ ಸೇರಿಕೊಂಡ ರಿಂಕು ಸಿಂಗ್ ಏಕದಿನ ತಂಡಕ್ಕೆ ಪದಾರ್ಪಣೆ ಮಾಡುವ ಉತ್ಸುಕತೆಯಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ರಿಂಕುವಿನ ಆಟವನ್ನು ನೋಡಲು ಕಾತರದಿಂದ ಇದ್ದಾರೆ ಎಂದರೆ ತಪ್ಪಾಗದು. ಎಡಗೈ ಆಟಗಾರ ದಕ್ಷಿಣ ಆಫ್ರಿಕಾದ ಹೆಚ್ಚು ಬೌನ್ಸ್ ಇರುವ ಪಿಚ್ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಇವರ ಚೊಚ್ಚಲ ಪಂದ್ಯದ ನಿರೀಕ್ಷೆ ಹೆಚ್ಚಿನವರಲ್ಲಿದೆ.
ರಿಂಕು vs ರಜತ್: ಇಂದೋರ್ ಮೂಲದ ಬಲಗೈ ಆಟಗಾರ ಪಾಟಿದಾರ್ 2022ರಲ್ಲಿಯೇ ಭಾರತದ ಏಕದಿನ ತಂಡಕ್ಕೆ ಸೇರ್ಪಡೆ ಆಗಿದ್ದರು. ಆದರೆ ಕಳೆದ ಒಂದು ವರ್ಷದಲ್ಲಿ ಅವರು ಗಾಯಕ್ಕೆ ತುತ್ತಾಗಿ ತಂಡಕ್ಕೆ ಮರಳಲು ಸಮಸ್ಯೆ ಎದುರಿಸಿದರು. ಈ ವರ್ಷದ ಆರಂಭದಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ರಿಂಕು ಸಿಂಗ್ ಅವರು 6ನೇ ಸ್ಥಾನದಲ್ಲಿ ದೇಶೀಯ ಕ್ರಿಕೆಟ್ ಮತ್ತು ಟಿ20ಯಲ್ಲಿ ಆಡಿದ್ದಾರೆ. 30 ವರ್ಷದ ಪಾಟಿದಾರ್ ಅವರು ತಮ್ಮ ರಾಜ್ಯ ತಂಡ ಮಧ್ಯಪ್ರದೇಶಕ್ಕಾಗಿ ನಂ. 4ಕ್ಕೆ ಆಡಿದ್ದಾರೆ. ಅಯ್ಯರ್ ಸ್ಥಾನ ತೆರವಾಗಿರುವುದರಿಂದ ರಜತ್ಗೆ ಹೆಚ್ಚಿನ ಅವಕಾಶ ಇದೆ.
ಸಾಯಿ ಸ್ಥಾನ ಭದ್ರ: ವಿಕೆಟ್ ಕೀಪರ್ ಸ್ಥಾನದಲ್ಲಿ ನಾಯಕ ರಾಹುಲ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅನುಭವಿ ಸಂಜು ಸ್ಯಾಮ್ಸನ್ಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಸಹ ಸಂಜುಗೆ ಸಿಗಲಿಲ್ಲ. ಹೀಗಾಗಿ ರಾಹುಲ್ ಬ್ಯಾಟರ್ ಆಗಿ ಉಳಿದು ಸಂಜುಗೆ ಸ್ಥಾನ ಕೊಡುವ ಅಗತ್ಯವೂ ಇದೆ. 6ನೇ ಸ್ಥಾನದಲ್ಲಿ ಸ್ಯಾಮ್ಸನ್ ಆಡುತ್ತಿದ್ದಾರೆ. ಹೀಗಾಗಿ ರಿಂಕುಗೆ ಆ ಸ್ಥಾನ ಸಿಗುವುದು ಹೆಚ್ಚು ಕಡಿಮೆ ಕಷ್ಟ ಎಂದೇ ಹೇಳಬಹುದು. ರಿಂಕು ಮತ್ತು ಪಾಟಿದಾರ್ ಅವರನ್ನು ತಂಡದಲ್ಲಿ ಆಡಿಸಬೇಕಾದರೆ ತಿಲಕ್ ವರ್ಮಾ ಅವರನ್ನು ಕೂರಿಸಬೇಕಾಗುತ್ತದೆ. ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ದಾಖಲಿಸಿ ಯುವ ಎಡಗೈ ಓಪನರ್ ಬಿ ಸಾಯಿ ಸುದರ್ಶನ್ ಸ್ಥಾನವನ್ನು ಭದ್ರ ಪಡಿಸಿಕೊಂಡರು.
ಲಯಕ್ಕೆ ಮರಳ ಬೇಕಿದೆ ಹರಿಣಗಳ ಬ್ಯಾಟಿಂಗ್: ಹರಿಣಗಳ ಪಡೆಗೆ ಈ ಸರಣಿಯು ಕ್ವಿಂಟನ್ ಡಿ ಕಾಕ್ ನಿವೃತ್ತಿಯ ನಂತರ ಮೊದಲ ಸರಣಿ ಆಗಿದೆ. ವೈಟ್ ಬಾಲ್ ಸ್ಪರ್ಧೆಯಲ್ಲಿ ತವರಿನಲ್ಲೇ ದಕ್ಷಿಣ ಆಫ್ರಿಕಾ ಪಡೆ ಭಾರತದ ಬೌಲಿಂಗ್ಗೆ ಪರದಾಡಿದೆ. ಎರಡನೇ ಪಂದ್ಯಕ್ಕೆ ಹರಿಣಗಳು ಮೊನಚಾದ ಬ್ಯಾಟಿಂಗ್ನ್ನು ಕಂಡುಕೊಳ್ಳಬೇಕಿದೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ಸ್, ಹೆನ್ರಿಚ್ ಕ್ಲಾಸೆನ್ಸ್ ಮತ್ತು ಡೇವಿಡ್ ಮಿಲ್ಲರ್ ಭಾರತದ ವಿರುದ್ಧ ಪುಟಿದೇಳಬೇಕಿದೆ. ಮೊದಲ ಪಂದ್ಯ ಹಗಲಿನಲ್ಲೇ ನಡೆದರೆ, ಎರಡನೇ ಪಂದ್ಯ ಹೊನಲು ಬೆಳಕಿನಲ್ಲಿ ಇರಲಿದೆ. ಸರಣಿ ಸಮಬಲ ಮಾಡಲು ಹರಿಣಗಳು ಗುದ್ದಾಡಬೇಕಿದೆ.
ಭಾರತದ ಬೌಲಿಂಗ್ ಸ್ಥಿರ: ಅರ್ಶದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅನುಭವಿ ಬೌಲರ್ಗಳಾದ ಸಿರಾಜ್, ಬುಮ್ರಾ ಮತ್ತು ಶಮಿ ಹೊರತಾಗಿ ಹೊಸ ಭರವಸೆ ನೀಡಿದ್ದಾರೆ. ಭರವಸೆಯ ಮುಖೇಶ್ ಕುಮಾರ್ ದಕ್ಷಿಣ ಆಫ್ರಿಕಾ ಎದುರು ಪುನರಾಗಮನ ಮಾಡಬೇಕಿದೆ. ಇಲ್ಲ ಆಕಾಶ್ ದೀಪ್‌ಗೆ ತಂಡ ಚೊಚ್ಚಲ ಕರೆ ನೀಡಬಹುದು.
ತಂಡಗಳು.. ಭಾರತ: ರುತುರಾಜ್ ಗಾಯಕ್‌ವಾಡ್, ಸಾಯಿ ಸುದರ್ಶನ್, ರಜತ್ ಪಾಟಿದಾರ್, ತಿಲಕ್ ವರ್ಮಾ, ಕೆಎಲ್ ರಾಹುಲ್(ನಾಯಕ/ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್
ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಝೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ
ಪಂದ್ಯ: ಡಿಸೆಂಬರ್ 19 ಮಂಗಳವಾರ, ಗ್ಕೆಬರ್ಹಾ, ಸೇಂಟ್ ಜಾರ್ಜ್ ಪಾರ್ಕ್. ಸಂಜೆ 4:30ಕ್ಕೆ (ಭಾರತೀಯ ಕಾಲಮಾನ)
ಇದನ್ನೂ ಓದಿ: ಯಶಸ್ವಿ ಬೌಲಿಂಗ್ ರಹಸ್ಯ ಹಂಚಿಕೊಂಡ ಅರ್ಶದೀಪ್, ಅವೇಶ್ ಜೋಡಿ