ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಾಯಕತ್ವ ತೆಗೆದುಹಾಕುವ ಬಗ್ಗೆ ಚರ್ಚೆ ನಡೆಯುತ್ತಿದೆ. ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಪಂದ್ಯಗಳಲ್ಲಿ ಸೋತಾಗಲೆಲ್ಲ ಕ್ರಿಕೆಟ್ ಅಭಿಮಾನಿಗಳು ತುಂಬಾ ಕೋಪಗೊಳ್ಳುವುದು ಸಾಮಾನ್ಯ.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರು ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವುದು ಮತ್ತು ಪ್ಲೇಯಿಂಗ್-11ರಲ್ಲಿ ನಂಬರ್-1 ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ಸೇರಿಸದೇ ಇರುವಂತಹ ನಿರ್ಧಾರಗಳನ್ನು ಅನೇಕ ಅನುಭವಿ ಆಟಗಾರರು ಪ್ರಶ್ನಿಸಿದ್ದಾರೆ. ಆದರೆ, ಇದೀಗ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ರೋಹಿತ್ ಶರ್ಮಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ನಿರ್ಭೀತಿಯಿಂದ ವಿಶ್ವಕಪ್ ತಂಡ ಮುನ್ನಡೆಸಲಿ: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸೋಲಿನ ನಂತರ ಎಲ್ಲೆಡೆಯಿಂದ ಟೀಕೆ ಎದುರಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಗಂಗೂಲಿ, "ಆಸ್ಟ್ರೇಲಿಯಾದಲ್ಲಿ ಆಸಿಸ್ ತಂಡವನ್ನು ಸೋಲಿಸಿದ ಅದೇ ತಂಡವು ಇಂಗ್ಲೆಂಡ್ ಅನ್ನು ತವರಿನಲ್ಲಿ ಮಣಿಸಿದೆ. ನಾವು ನಮ್ಮ ತಂಡ ಮತ್ತು ನಮ್ಮ ನಾಯಕನನ್ನು ಬೆಂಬಲಿಸಬೇಕು. ರೋಹಿತ್ ಯಾವುದೇ ಭಯವಿಲ್ಲದೆ ಮುನ್ನಡೆಯಬೇಕು ಎಂದು ನಾನು ಬಯಸುತ್ತೇನೆ".
"ಮುಂದಿನ ಆರು ತಿಂಗಳ ನಂತರ ವಿಶ್ವಕಪ್ ಬರಲಿದೆ. ರೋಹಿತ್, ಗಿಲ್, ಕೊಹ್ಲಿ, ಹಾರ್ದಿಕ್, ಜಡೇಜಾ, ಬುಮ್ರಾ, ಶಮಿ, ಸಿರಾಜ್ ಮತ್ತು ಇತರರನ್ನು ಹೊಂದಿರುವ ತಂಡ ಇರಲಿದೆ. ಈ ತಂಡವು ಯಾವಾಗಲಾದರೂ ಗೆಲ್ಲುತ್ತದೆ. ನಾನು ದ್ರಾವಿಡ್ ಅವರೊಂದಿಗೆ ಆಡಿದ್ದೇನೆ ಮತ್ತು ಅವರ ಬಗ್ಗೆ ಸಾಕಷ್ಟು ಗೌರವವಿದೆ. ಅವರು ರೋಹಿತ್ ಅವರೊಂದಿಗೆ ಈ ತಂಡವನ್ನು ಮುನ್ನಡೆಸಬಹುದು. ಇದಕ್ಕಾಗಿ ತಂಡವನ್ನು ಇನ್ನಷ್ಟು ಬಲಿಷ್ಟಗೊಳಿಸುವ ಅಗತ್ಯ ಇದೆ" ಎಂದಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ದಾಖಲೆ: 2007ರಲ್ಲಿ ಐರ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ 2017ರಲ್ಲಿ ನಾಯಕತ್ವದ ಅವಕಾಶ ಪಡೆದಿದ್ದರು. ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿ ನಿದಾಸ್ ಟ್ರೋಫಿಯಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಆಡುತ್ತಿದ್ದು, ರೋಹಿತ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಆಯಿತು. ಏಷ್ಯಾ ಕಪ್ 2018ರಲ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 7 ನೇ ಬಾರಿಗೆ ಚಾಂಪಿಯನ್ ಆಯಿತು.
ರೋಹಿತ್ ನಾಯಕತ್ವದಲ್ಲಿ ಭಾರತ 26 ಏಕದಿನ ಪಂದ್ಯಗಳನ್ನು ಆಡಿದ್ದು 19ರಲ್ಲಿ ಗೆದ್ದಿದೆ. 51 ಟಿ20 ಪಂದ್ಯಗಳಲ್ಲಿ, 39ರಲ್ಲಿ ಗೆಲುವು ಮತ್ತು 12ರಲ್ಲಿ ಸೋಲಿನ ಸಿಹಿ ಕಂಡಿದೆ. ರೋಹಿತ್ ನಾಯಕತ್ವದಲ್ಲಿ ಭಾರತ 7 ಟೆಸ್ಟ್ ಪಂದ್ಯಗಳಲ್ಲಿ 4 ಗೆದ್ದು, 2 ಸೋಲು ಮತ್ತು 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ರೋಹಿತ್ ಗೆಲುವಿನ ಶೇಕಡಾವಾರು ಟಿ20ಯಲ್ಲಿ 76.47, ಏಕದಿನದಲ್ಲಿ 73.07 ಮತ್ತು ಟೆಸ್ಟ್‌ನಲ್ಲಿ 57.14 ರಷ್ಟಿದೆ.
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಯಾಕೆ ಬಿಟ್ರು ಎಂಬುದೇ ಪ್ರಶ್ನೆ: ಸೌರವ್ ಗಂಗೂಲಿ