ಬೆಂಗಳೂರು: ಬಿಸಿಸಿಐ ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ನೂತನ ಅಧ್ಯಕ್ಷ ರೋಜರ್ ಬಿನ್ನಿ ಹಾಡಿ ಹೊಗಳಿದ್ದಾರೆ. ಸೌರವ್ ಗಂಗೂಲಿ ಒಬ್ಬ ದೊಡ್ಡ ವ್ಯಕ್ತಿ. ಅವರು ಭಾರತೀಯ ಕ್ರಿಕೆಟ್ನ ಚಹರೆ ಬದಲಿಸಿದ ಮನುಷ್ಯ ಎಂದು ಶ್ಲಾಘಿಸಿದರು.
ಬೆಂಗಳೂರಿನಲ್ಲಿಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಗೂಲಿ ಯುವ ಜನಾಂಗದ ದೊಡ್ಡ ಐಕಾನ್. ಒಬ್ಬ ಕ್ರಿಕೆಟಿಗನ ದೃಷ್ಟಿಕೋನವನ್ನು ರಾತ್ರಿ ಬೆಳಗಾಗುವುದರೊಳಗೆ ಬದಲಿಸುವ ಸಾಮರ್ಥ್ಯವನ್ನು ಗಂಗೂಲಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಏಕದಿನ ವಿಶ್ವಕಪ್‌ನಲ್ಲಿ ಎಲ್ಲ ದೊಡ್ಡ ತಂಡಗಳು ಭಾಗಿ: ಪಾಕ್ಗೆ ಅನುರಾಗ್ ಠಾಕೂರ್ ಟಕ್ಕರ್
ಬೇರೊಬ್ಬರ ಹಿತಾಸಕ್ತಿಗಾಗಿ ಸೌರವ್ ವಂಚಿತ- ಮಮತಾ: ಇದೇ ವೇಳೆ ಐಸಿಸಿ ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡದೇ ಇರುವ ಬಗ್ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ವಿರುದ್ಧ ಟೀಕಿಸಿದ್ದಾರೆ. ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ನಾಚಿಕೆಗೇಡಿನ ರಾಜಕೀಯ ದ್ವೇಷ ಎಂದು ಆರೋಪಿಸಿದ್ದಾರೆ.
ಗಂಗೂಲಿ ಅವರನ್ನು ಏಕೆ ಐಸಿಸಿಗೆ ಕಳುಹಿಸಿಲ್ಲ?. ಇದು ಯಾರೋ ಒಬ್ಬರ ಹಿತಾಸಕ್ತಿಯನ್ನು (ಕ್ರಿಕೆಟ್ ಮಂಡಳಿಯಲ್ಲಿ) ಭದ್ರಪಡಿಸುವ ಕ್ರಮವಾಗಿದೆ. ನಾನು ವಿವಿಧ ಬಿಜೆಪಿ ನಾಯಕರೊಂದಿಗೆ ಮಾತನಾಡಿದ್ದೇನೆ, ಆದರೆ, ಗಂಗೂಲಿ ಅವರಿಗೆ ಅವಕಾಶ ನೀಡಲಿಲ್ಲ. ಅವರು ವಂಚಿತರಾಗಿದ್ದಾರೆ. ಇದು ನಾಚಿಕೆಗೇಡಿನ ರಾಜಕೀಯ ಸೇಡು ಎಂದು ಮಮತಾ ಕಿಡಿಕಾರಿದ್ದಾರೆ.
ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಇಲ್ಲವೇ, ಐಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಸುದ್ದಿ ಸಾಕಷ್ಟು ಹರಿದಾಡಿತ್ತು. ಆದರೆ, ಮಂಗಳವಾರ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೌರವ್ ಗಂಗೂಲಿ ಸ್ಥಾನಕ್ಕೆ ರೋಜರ್ ಬಿನ್ನಿ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಕಾರ್ಯದರ್ಶಿಯಾಗಿ ಜಯ್ ಶಾ ಎರಡನೇ ಅವಧಿಗೆ ಮುಂದುವರೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಸಿಸಿ ಚುನಾವಣೆ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೇ ಸಭೆಯನ್ನು ಮುಗಿಸಲಾಗಿದೆ.
ಇದನ್ನೂ ಓದಿ: ಏಷ್ಯಾ ಕಪ್: ಪಾಕ್ಗೆ ಟೀಂ ಇಂಡಿಯಾ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ ರೋಜರ್ ಬಿನ್ನಿ