ಹರಾರೆ(ಜಿಂಬಾಬ್ವೆ): ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಮಂಗಳವಾರ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದ್ದಾರೆ. ಸರಣಿ ಉದ್ದಕ್ಕೂ ಅತ್ಯದ್ಭುತ ಪ್ರದರ್ಶನ ನೀಡಿರುವ ಯಂಗ್ ಪ್ಲೇಯರ್ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿರುವ ಶುಭಮನ್ ಗಿಲ್, ಅದನ್ನು ತಮ್ಮ ತಂದೆಗೆ ಅರ್ಪಣೆ ಮಾಡಿದ್ದಾರೆ. ಫೈನಲ್ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್‌ನಲ್ಲಿ ಮಾತನಾಡಿದ ಅವರು, ಚೊಚ್ಚಲ ಶತಕ ಸಿಡಿಸಿದ್ದಕ್ಕಾಗಿ ಖುಷಿಯಾಗ್ತಿದೆ. ನನ್ನ ಈ ಪರಿಶ್ರಮದ ಹಿಂದೆ ತಂದೆಯ ಪಾತ್ರ ಅತಿ ಮುಖ್ಯವಾಗಿದೆ. ಅವರು ನನ್ನ ಪ್ರಾಥಮಿಕ ಕೋಚ್. ಈ ಹಿಂದಿನ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ್ದಕ್ಕಾಗಿ ಅವರು ನನಗೆ ಕೆಲವೊಂದು ಟಿಪ್ಸ್ ನೀಡಿದ್ದರು. ನನ್ನ ಚೊಚ್ಚಲ ಶತಕ ಅವರಿಗೆ ಅರ್ಪಣೆ ಎಂದು ಹೇಳಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿ ಮುಗಿದ ಬಳಿಕ ಶುಭಮನ್ ಗಿಲ್ ಅವರನ್ನು ತಂಡದ ಸಹ ಆಟಗಾರ ಇಶಾನ್ ಕಿಶನ್ ಸಂದರ್ಶನ ಮಾಡಿದ್ದು, ಈ ವೇಳೆ ಎಲ್ಲ ವಿಚಾರ ಹೊರಹಾಕಿದ್ದಾರೆ. ಮೂರು ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಒಂದು ಶತಕ ಸೇರಿದಂತೆ 245ರನ್ ಸಿಡಿಸಿದ್ದು, ಗರಿಷ್ಠ ಸ್ಕೋರ್ರ ಆಗಿ ಹೊರಹೊಮ್ಮಿದ್ದಾರೆ.
ಯುವಿ ಭೇಟಿ ಮಾಡಿದ್ದ ಗಿಲ್: ಜಿಂಬಾಬ್ವೆ ವಿರುದ್ಧದ ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಶುಭಮನ್ ಗಿಲ್ ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡಿದ್ದರಂತೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಹೇಳಿಕೊಂಡಿರುವ 22ರ ಬ್ಯಾಟರ್, ನನ್ನ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಡೀಪ್ ಬ್ಯಾಟಿಂಗ್ ಮಾಡಲು ಕಿವಿಮಾತು ಹೇಳಿದ್ದರು. ಉತ್ತಮ ಅವಕಾಶವಿದೆ. ಶತಕಗಳಿಸುವಂತೆ ಪ್ರೇರೇಪಿಸಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೃದಯ ಗೆದ್ದ ಶುಭಮನ್.. ಜಿಂಬಾಬ್ವೆ ಆಲ್ರೌಂಡರ್ಗೆ ಜರ್ಸಿ ಗಿಫ್ಟ್ ನೀಡಿದ ಗಿಲ್
ಶುಭಮನ್ ಗಿಲ್ ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದಂತೆ ಯುವರಾಜ್ ಸಿಂಗ್ ಟ್ವೀಟ್ ಮಾಡಿ, ಅಭಿನಂದಿಸಿದ್ದರು. ಚೆನ್ನಾಗಿ ಆಡಿದ್ದೀರಿ. ಶತಕಕ್ಕೆ ನೀವೂ ಅರ್ಹರು. ಇದು ಕೇವಲ ಪ್ರಾರಂಭ ಎಂದು ಹೇಳಿದ್ದರು.
ಈ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಶುಭಮನ್ ಗಿಲ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ, 98ರನ್ಗಳಿಕೆ ಮಾಡಿದ್ದರು. ಈ ವೇಳೆ ಮಳೆ ಸುರಿದ ಕಾರಣ ಪಂದ್ಯ ರದ್ದುಗೊಳಿಸಲಾಗಿತ್ತು. ಹೀಗಾಗಿ, ಗಿಲ್ ಶತಕದ ಆಟ ನೂಚ್ಚುನೂರಾಗಿತ್ತು. ಆದರೆ, ನಿನ್ನೆಯ ಪಂದ್ಯದಲ್ಲಿ ಅವರು 130ರನ್ ಗಳಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶುಭಮನ್ ಗಿಲ್ ಗುಜರಾತ್ ಲಯನ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು, ಅನೇಕ ಅದ್ಭುತ ಇನ್ನಿಂಗ್ಸ್ ಆಡಿದ್ದು, ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.