ಸಿಡ್ನಿ: ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ ತಂಡದ ಕೋಚ್, ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕ್ಕಿ ಪಾಂಟಿಂಗ್ ಅವರು ಭಾರತದ ಫೃಥ್ವಿಶಾ, ಅವೇಶ್ ಖಾನ್ ಮತ್ತು ರಿತುರಾಜ್ ಗಾಯಕ್ವಾಡ್ ಅವರ ಕ್ರಿಕೆಟ್ ಕೌಶಲ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ, ಈ ಮೂವರೂ ಐಪಿಎಲ್ ಮತ್ತು ಕ್ರಿಕೆಟ್ ಇಂಡಿಯಾದಲ್ಲಿ ಬೆಳಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಪೃಥ್ವಿ ಶಾ ಉತ್ತಮವಾಗಿ ಬ್ಯಾಟ್ ಬೀಸಲಿದ್ದಾರೆ. ಅವರು ಕಳೆದ ಐಪಿಎಲ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ದೆಹಲಿ ತಂಡ ಅವರನ್ನು ಹರಾಜಿಗೆ ಬಿಡದೇ ತಂಡದಲ್ಲಿ ಉಳಿಸಿಕೊಂಡಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಪೃಥ್ವಿ ಶಾ ಕ್ರಿಕೆಟ್ನ ಸೂಕ್ಷ್ಮ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ನಾನು ನೋಡಿದಂತೆ ಶಾ ಉತ್ತಮ ಬ್ಯಾಟಿಂಗ್ ಕೌಶಲ್ಯಗಳನ್ನು ಹೊಂದಿದ್ದಾರೆ. ಇದು ಐಪಿಎಲ್ನ ದೆಹಲಿ ತಂಡಕ್ಕೆ ಮತ್ತು ಭಾರತ ತಂಡಕ್ಕೂ ಉಪಯುಕ್ತವಾಗಲಿದೆ. ಅವರು ಸರಿಯಾಗಿ ಬ್ಯಾಟ್ ಮಾಡದಿದ್ದಾಗ ಹೆಚ್ಚು ಹೊತ್ತು ಕ್ರೀಸ್ನಲ್ಲಿರಲು ಬಯಸುವುದಿಲ್ಲ. ಲಯ ಸರಿಯಿದ್ದರೆ ಅದ್ಭುತವಾಗಿ ಬ್ಯಾಟ್ ಬೀಸುತ್ತಾರೆ ಎಂದು ಶಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ರಿತುರಾಜ್ ಗಾಯಕ್ವಾಡ್ ಕೂಡ ಅದ್ಭುತ ಆಟಗಾರ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದ್ದರು. ಅವರು ಮುಂದಿನ ದಿನಗಳಲ್ಲಿ ಭಾರತದ ಮೂರೂ ಮಾದರಿಯ ಕ್ರಿಕೆಟ್ನಲ್ಲಿ ತಮ್ಮದೇ ಸ್ಥಾನ ಪಡೆಯಲಿದ್ದಾರೆ. ವೇಗದ ಬೌಲರ್ ಅವೇಶ್ ಖಾನ್ ಕೂಡ ಉತ್ತಮ ಬೌಲರ್. ಅವರೂ ಕೂಡ ಭಾರತದ ಭವಿಷ್ಯದ ಆಟಗಾರ ಎಂದು ಬಣ್ಣಿಸಿದ್ದಾರೆ.
ಓದಿ: ಮೊಣಕೈ ಗಾಯದಿಂದ ಕಂಗೆಟ್ಟ ಕೇನ್ ವಿಲಿಯಮ್ಸನ್ : 2022ರ ಐಪಿಎಲ್ಗೆ ಅನುಮಾನ?