ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಶಾನ್ ಮಾರ್ಷ್ ಭಾನುವಾರ ವೃತ್ತಿಪರ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದರು. ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿರುವ ಅವರು, ಸಿಡ್ನಿ ಥಂಡರ್ ವಿರುದ್ಧ ಶನಿವಾರ ನಡೆದ ಪಂದ್ಯದ ಬಳಿಕ ಈ ನಿರ್ಧಾರ ಪ್ರಕಟಿಸಿದರು.
ಗಾಯದ ಕಾರಣಕ್ಕಾಗಿ ಬಿಗ್ಬ್ಯಾಷ್ನ ಆರಂಭಿಕ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಬಳಿಕ ಚೇತರಿಸಿಕೊಂಡು ಮೆಲ್ಬೋರ್ನ್ ರೆನೆಗೇಡ್ಸ್ ಪರ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲೂ ಉತ್ತಮ ಬ್ಯಾಟ್ ಬೀಸಿ 64 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಮಾರ್ಷ್ ಐದು ಪಂದ್ಯಗಳಲ್ಲಿ 45.25 ಸರಾಸರಿ, 138.16 ಸ್ಟ್ರೈಕ್ ರೇಟ್‌ನಲ್ಲಿ 181 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ದಾಖಲಾಗಿವೆ.
ಸಹಕರಿಸಿದ ಎಲ್ಲರಿಗೂ ಧನ್ಯವಾದ: ಪಂದ್ಯದ ಗೆಲುವಿನ ಬಳಿಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ ಮಾರ್ಷ್, ಆಸ್ಟ್ರೇಲಿಯಾ ಮತ್ತು ಬಿಗ್ಬ್ಯಾಷ್ನಲ್ಲಿ ರೆನೆಗೇಡ್ಸ್ ಪರ ಆಡುವುದನ್ನು ಇಷ್ಟಪಡುತ್ತೇನೆ. ಕಳೆದ ಐದು ವರ್ಷಗಳಲ್ಲಿ ನಾನು ಹಲವು ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಬಿಬಿಎಲ್ನಲ್ಲಿ ನನಗೆ ಸಿಕ್ಕ ಸ್ನೇಹವು ಜೀವನದ ಕೊನೆಯವರೆಗೂ ಉಳಿಯುತ್ತದೆ ಎಂದು 40 ವರ್ಷದ ಕ್ರಿಕೆಟಿಗ ಹೇಳಿದರು.
ಕ್ರಿಕೆಟ್ ವೃತ್ತಿ ಬದುಕಿನಲ್ಲಿ ನೆರವು ನೀಡಿದ, ತರಬೇತುದಾರರು, ಸಿಬ್ಬಂದಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ನೆರವಿನಿಂದಾಗಿ ನಾನು ಪರಿಪೂರ್ಣ ಕ್ರಿಕೆಟಿಗನಾಗಿ ಒಡಮೂಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಟ್ರೋಫಿ ಜಯಿಸಿದ್ದು ಸ್ಮರಣೀಯ: ಬಿಬಿಎಲ್ನ 2019-20 ಋತುವಿನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಫ್ರಾಂಚೈಸಿ ಸೇರುವ ಮೊದಲು, 2011-19ರ ಅವಧಿಯಲ್ಲಿ ಪರ್ತ್ ಸ್ಕಾರ್ಚರ್ಸ್ ಪರ ಸುದೀರ್ಘ ಮತ್ತು ಯಶಸ್ವಿ ಆಟಗಾರನಾಗಿ ಹೊರಹೊಮ್ಮಿದ್ದರು. ನಾನು ಪರ್ಥ್ ಸ್ಕಾರ್ಚರ್ಸ್‌ಗೆ ಬಹಳಷ್ಟು ಋಣಿಯಾಗಿದ್ದೇನೆ. ನಾನು ಆ ತಂಡದಲ್ಲಿ ಆಡುತ್ತಿದ್ದಾಗ ಅಚ್ಚಳಿಯದ ನೆನಪುಗಳು ಸಿಕ್ಕಿವೆ. ಎರಡು ಬಾರಿ ಟ್ರೋಫಿ ಜಯಿಸಿದ್ದನ್ನು ನಾನು ಮರೆಯಲಾರೆ ಎಂದು ನೆನಪಿಸಿಕೊಂಡರು.
ಮಾರ್ಷ್ ಆಸ್ಟ್ರೇಲಿಯಾ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನ ಮಾದರಿಯಲ್ಲಿ 5,200ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳನ್ನು ದಾಖಲಿಸಿದ್ದಾರೆ. ಬಳಿಕ ಲಯ ಕಳೆದುಕೊಂಡ ಅವರಿಗೆ ಕಾಂಗರೂ ಪಡೆಯ ಪರವಾಗಿ 2019 ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯ ಕೊನೆಯದಾಗಿತ್ತು. ಇದಾದ ಬಳಿಕ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲಿಲ್ಲ.
ಇದನ್ನೂ ಓದಿ: ಕರ್ನಾಟಕ ರಣಜಿ ತಂಡದಲ್ಲಿ ಬೆಳಗಾವಿಯ ಕುಸ್ತಿಪಟುವಿನ ಮಗ: ಹಲವು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಫಲ