ಓವಲ್(ಲಂಡನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ 157 ರನ್ಗಳ ಅಧಿಕಾರಯುತ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

ರೋಮಾಂಚಕ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಲಯ ಕಂಡುಕೊಂಡ ಹಿಟ್‌ಮ್ಯಾನ್ ಜನಪ್ರಿಯತೆಯ ರೋಹಿತ್ ಶರ್ಮಾ (127 ರನ್) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಕುರಿತು ಮಾತನಾಡಿರುವ ರೋಹಿತ್ ಶರ್ಮಾ, 'ನಾನು ಮಾತ್ರವಲ್ಲ, ಶಾರ್ದೂಲ್ ಠಾಕೂರ್ ಕೂಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹ ಆಟಗಾರ' ಎಂದು ಸಹ ಆಟಗಾರನನ್ನು ಕೊಂಡಾಡಿದರು. ಓವಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಅವರಿಗೂ ಈ ಗೌರವ ಸಲ್ಲಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, 'ವಿದೇಶ ಪ್ರವಾಸ ಕೈಗೊಂಡು ಈ ರೀತಿಯ ಗೆಲುವು ಸಿಕ್ಕಾಗ ನಿಜಕ್ಕೂ ಖುಷಿಯಾಗುತ್ತದೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಆಟ ನಮ್ಮ ತಂಡದಿಂದ ಮುಂದುವರೆಯಲಿದೆ' ಎಂದು ಹೇಳುತ್ತಾ ಆಂಗ್ಲಪಡೆಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. 'ಇಂತಹ ಮೈದಾನಗಳಲ್ಲಿ ರನ್ಗಳಿಕೆ ತುಂಬಾ ಕಷ್ಟ. ಆದರೆ ಶಾರ್ದೂಲ್ ಠಾಕೂರ್ ಸುಲಭವಾಗಿ ಬ್ಯಾಟ್ ಬೀಸಿದ್ದರಿಂದ ತಂಡ ಹೆಚ್ಚು ರನ್ಗಳಿಕೆ ಮಾಡಲು ಸಾಧ್ಯವಾಯಿತು' ಎಂದರು.
ಓವಲ್ ಮೈದಾನದಲ್ಲಿ ಟೀಂ ಇಂಡಿಯಾ 50 ವರ್ಷಗಳ ಬಳಿಕ ದಾಖಲೆಯ ಗೆಲುವು ಪಡೆದಿದೆ. ಮುಂದಿನ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ.