ನವದೆಹಲಿ: ಏಷ್ಯಾಕಪ್ 2023ನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿತ್ತು. ಆದರೆ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡದಿರುವ ಹಿನ್ನೆಲೆಯಲ್ಲಿ ತಟಸ್ಥ ಸ್ಥಳಕ್ಕೆ ವರ್ಗಾಯಿಸುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ ಹೇಳಿದ್ದರು. ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಯೋಜಿಸುವಂತೆ ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಈಗ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಯೋಜನೆ ಬಗೆಗಿನ ಗೊಂದಲಗಳು ಹಾಗೇ ಇವೆ. ಇತ್ತೀಚೆಗೆ ಬಿಸಿಸಿಐ ಸರ್ಕಾರ ನಿರ್ಣಯ ಮಾಡಲಿ ಎಂದೂ ಸಹ ಹೇಳಿತ್ತು. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪಾಕಿಸ್ತಾನಕ್ಕೆ ಭಾರತ ಏಷ್ಯಾ ಕಪ್ಗಾಗಿ ಪ್ರವಾಸ ಮಾಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿ, ನಂತರ ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆ ಈ ಬಗ್ಗೆ ನಿಲುವು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ ಶಾಹಿದ್ ಅಫ್ರಿದಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಭಾರತ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡಬೇಕು ಮತ್ತು ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಸಬೇಕು. ಇದರಿಂದ ಉಭಯ ದೇಶಗಳ ಸಂಬಂಧ ಸುಧಾರಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗಾಗಿ ಇತ್ತೀಚೆಗೆ ಹಲವು ತಂಡಗಳು ನಮ್ಮ ದೇಶಕ್ಕೆ ಭೇಟಿ ನೀಡಿವೆ ಎಂದು ಪಾಕಿಸ್ತಾನದ ಭದ್ರತೆ ಕುರಿತು ಹೇಳಿದ್ದಾರೆ.
"ಭಾರತದಲ್ಲಿ ನಮಗೂ ಭದ್ರತೆಯ ಅಪಾಯವಿತ್ತು, ಆ ನಂತರ ಎರಡೂ ದೇಶಗಳ ಸರ್ಕಾರ ಅನುಮತಿ ನೀಡಿದರೆ ನಾವು ಖಂಡಿತವಾಗಿಯೂ ಭೇಟಿ ನೀಡುತ್ತೇವೆ" ಎಂದು ಅಫ್ರಿದಿ ಹೇಳಿದ್ದಾರೆ. ತಮ್ಮ ಸಂದರ್ಶನದಲ್ಲಿ ಅವರು, ಉಭಯ ದೇಶಗಳ ನಡುವೆ ಕ್ರಿಕೆಟ್ ನಡೆಯಲು ಅವಕಾಶ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಶಾಹಿದ್ ಅಫ್ರಿದಿಯನ್ನು ಪಿಸಿಬಿ ದುರ್ಬಲವಾಗಿದೆಯೇ ಎಂದು ಕೇಳಿದ್ದಕ್ಕೆ, ಪಿಸಿಬಿ ದುರ್ಬಲವಾಗಿಲ್ಲ ಆದರೆ, ಅದು ಸ್ಪಷ್ಟ ನಿಲುವುಗಳನ್ನು ತೆಗೆದುಕೊಳ್ಳಬೇಕಿದೆ. ನಾನು ನಿಮ್ಮೊಂದಿಗೆ ಸ್ನೇಹಿತರಾಗಲು ಬಯಸಿದರೆ ಮತ್ತು ನೀವು ನನ್ನೊಂದಿಗೆ ಸ್ನೇಹಿತರಾಗಲು ಬಯಸದಿದ್ದರೆ ನಾನು ಏನು ಮಾಡಬಹುದು? ಎಂದು ಹೇಳಿದ್ದಾರೆ. ಈ ಮೂಲಕ ಅಫ್ರಿದಿ ಪಿಸಿಬಿಯನ್ನು ದುರ್ಬಲ ಎಂದು ಕರೆಯುವ ಬದಲು ಬಿಸಿಸಿಐ ಅನ್ನು ಬಲಿಷ್ಠ ಮಂಡಳಿ ಎಂದು ಕರೆದಿದ್ದಾರೆ. ಹೆಚ್ಚು ಶಕ್ತಿ ಇರುವ ವ್ಯಕ್ತಿಗೆ ಹೆಚ್ಚು ಜವಾಬ್ದಾರಿಗಳಿರುತ್ತವೆ ಎಂದು ಬಿಸಿಸಿಐಗೂ ಮನವಿ ಮಾಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಜಯ್ ಶಾ ಪಾಕಿಸ್ತಾನ ಪ್ರವಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದದರು. ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾಕಪ್ ಪಾಕ್ನಲ್ಲೇ ನಡೆಸಬೇಕು ಎಂಬುದಕ್ಕಾಗಿ ಹಲವಾರು ಬೇಡಿಕೆಗಳನ್ನು ಇಟ್ಟಿತ್ತು. ಏಷ್ಯಾ ಕಪ್ನಲ್ಲಿ ಭಾರತ ಪಾಲ್ಗೊಳ್ಳದಿದ್ದರೆ ಇಂಡಿಯಾದಲ್ಲಿ ನಡೆಯುವ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಆಡುವುದಿಲ್ಲ ಎಂದು ಹೇಳಿಕೊಂಡಿತ್ತು.
ಕಳೆದ ವರ್ಷದಿಂದ ಪಾಕ್ ನೆಲದಲ್ಲಿ ದ್ವಿಪಕ್ಷೀಯ ಸರಣಿ: ಕಳೆದ ವರ್ಷ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ ಹೋಗಿ ಆಡುವ ಮೂಲಕ ಬಹಳಾ ವರ್ಷಗಳ ನಂತರ ಪಾಕ್ ನೆಲದಲ್ಲಿ ದ್ವಿಪಕ್ಷೀಯ ಸರಣಿ ಆಯೊಜನೆಗೊಂಡಿತು. 2009ರಲ್ಲಿ ಲಂಕಾ ಕ್ರಿಕೆಟಿಗರ ಮೇಲೆ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಯಾವುದೇ ದೇಶದವೂ ದ್ವಿಪಕ್ಷೀಯ ಸರಣಿಗೆ ಹೋಗಿರಲಿಲ್ಲ.
ಇದನ್ನೂ ಓದಿ: ಚೆಪಾಕ್ ಕ್ರಿಡಾಂಗಣದಲ್ಲಿ ಕೊಹ್ಲಿ ದಾಖಲೆ: ಮೂರನೇ ಪಂದ್ಯಕ್ಕೆ "ವಿರಾಟ" ಭರವಸೆ