ನವದೆಹಲಿ: 2008ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಕ್ರಿಕೆಟ್ ತಂಡವನ್ನು ಧೋನಿ ಮುನ್ನಡೆಸುತ್ತಿದ್ದರು. ಆಗ ನಾನು ಫಾರ್ಮ್ ಕಳೆದುಕೊಂಡಿದ್ದೆ. ಹೀಗಾಗಿ ಧೋನಿ ನನ್ನನ್ನು ತಂಡದಿಂದ ಕೈಬಿಟ್ಟಿದ್ದರು. ಇದರಿಂದ ಬೇಸರಗೊಂಡು ನಾನು ನಿವೃತ್ತಿ ತೆಗೆದುಕೊಳ್ಳಲು ತೀರ್ಮಾನಕ್ಕೆ ಬಂದಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಳೆಯ ನೆನಪೊಂದನ್ನು ಸ್ಮರಿಸಿದ್ದಾರೆ.
ನಾವು 2008 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡುವಾಗ ನಿವೃತ್ತಿಯ ಕಲ್ಪನೆ ನನ್ನ ಮನಸ್ಸಿಗೆ ಬಂದಿತ್ತು. ಆಗ ನಾನು ಟೆಸ್ಟ್ ಸರಣಿಯಲ್ಲಿ ಪುನರಾಗಮನ ಮಾಡಿ 150 ರನ್ ಗಳಿಸಿದ್ದೆ. ಓವಲ್‌ನಲ್ಲಿ ಮೂರು-ನಾಲ್ಕು ಪಂದ್ಯಗಳಲ್ಲಿ ಹೆಚ್ಚು ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಧೋನಿ ನನ್ನನ್ನು 11ರ ಬಳಗದಿಂದ ಕೈಬಿಟ್ಟರು. ತಂಡದಿಂದ ಕೈಬಿಟ್ಟ ಬಳಿಕ ನಾನು ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳಲು ಯೋಚಿಸಿದ್ದೆ. ನಾನು ಕೇವಲ ಟೆಸ್ಟ್ ಕ್ರಿಕೆಟ್ ಆಡಬೇಕೆಂದು ಬಯಸಿದ್ದೆ. ಆ ಸಮಯದಲ್ಲಿ ಸಚಿನ್ ನನ್ನನ್ನು ತಡೆದರು.
ಓದಿ: ಕ್ರಿಕೆಟ್ ಅಂಗಳದಿಂದ ರಾಜಕೀಯಕ್ಕೆ ಬರ್ತಾರಾ 'ಬಿಸಿಸಿಐ ಬಾಸ್' ?: ಊಹಾಪೋಹಗಳಿಗೆ ಕಾರಣವೇನು?
ಇದು ನಿಮ್ಮ ಜೀವನದಲ್ಲಿ ಕೆಟ್ಟ ಸಮಯ. ಕಾದು ನೋಡೋಣ. ಪ್ರವಾಸ ಮುಗಿಸಿ ಮನೆಗೆ ಹೋಗಿ ಏನು ಮಾಡಬೇಕೆಂಬುದು ಆಲೋಚಿಸಿ. ಬಳಿಕ ಒಂದು ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದರು. ಅದೃಷ್ಟವಶಾತ್ ಆ ಸಮಯದಲ್ಲಿ ನಾನು ನಿವೃತ್ತಿ ಘೋಷಿಸಲಿಲ್ಲಎಂದು ಸೆಹ್ವಾಗ್ ಹೇಳಿದ್ದಾರೆ.
ಆಟಗಾರರು ಎರಡು ವಿಧ. ಒಂದು ರೀತಿಯ ಸವಾಲನ್ನು ಇಷ್ಟಪಡುವವರು. ಅವರು ಕಠಿಣ ಸಂದರ್ಭಗಳಲ್ಲಿ ಎಂಜಾಯ್ ಮಾಡುತ್ತಾರೆ. ಅದರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಅವರು ಎಲ್ಲಾ ಟೀಕೆಗಳನ್ನು ಕೇಳುತ್ತಾರೆ. ಮೈದಾನದಲ್ಲಿ ರನ್ ಗಳಿಸುವ ಮೂಲಕ ಅವರು ಟೀಕಾಕಾರಿಗೆ ಉತ್ತರ ನೀಡುತ್ತಾರೆ ಎಂದು ಸೆಹ್ವಾಗ್ ಹೇಳಿದರು.
ಇನ್ನೊಂದು ವಿಧ ಅಂದ್ರೆ ಟೀಕೆಗಳನ್ನು ನಿರ್ಲಕ್ಷಿಸುವುದು. ಏಕೆಂದರೆ ಅವರಿಗೆ ಮುಂದಿನ ಹಾದಿ ಬಗ್ಗೆ ತಿಳಿದಿರುತ್ತದೆ. ನಾನು ಅಂತಹ ಆಟಗಾರ. ನನ್ನನ್ನು ಯಾರು ಟೀಕಿಸಿದರೂ ಪರವಾಗಿಲ್ಲ. ನಾನು ಉತ್ತಮ ರನ್ ಗಳಿಸಿ ಮನೆಗೆ ಹೋಗಬೇಕು ಎಂದು ವೀರು ಹೇಳಿದರು.
2008ರಲ್ಲಿ ಟೀಂ ಇಂಡಿಯಾದ ತ್ರಿಕೋನ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಸೆಹ್ವಾಗ್ ಕೇವಲ 6, 33, 11, 14 ರನ್ ಗಳಿಸಿದ್ದರು. ಹೀಗಾಗಿ ಸೆಹ್ವಾಗ್ ಅವರನ್ನು ನಾಯಕ ಧೋನಿ 11ರ ಬಳಗದಿಂದ ಕೈಬಿಟ್ಟಿದ್ದರು.