ಬಫಲೋ ಪಾರ್ಕ್, ಪೂರ್ವ ಲಂಡನ್: ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಮಹಿಳಾ ತಂಡ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಟಿ-20 ಮಹಿಳಾ ತ್ರಿಕೋನ ಸರಣಿಗೆ ಮುತ್ತಿಕ್ಕಿದೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 109 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ, ಚೋಲೆ ಟ್ರಯಾನ್ ಅವರ 57 ರನ್‌ಗಳ ಇನ್ನಿಂಗ್ಸ್‌ನಿಂದ ದಕ್ಷಿಣ ಆಫ್ರಿಕಾ 18 ಓವರ್‌ಗಳಲ್ಲಿ ಐದು ವಿಕೆಟ್‌ಗೆ 113 ರನ್ ಗಳಿಸಿ ಸರಣಿ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದ ಭಾರತ ತಂಡಕ್ಕೆ ಆರಂಭ ಆಘಾತ: ಟಿ20 ಅಂತಾರಾಷ್ಟ್ರೀಯ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡಕ್ಕೆ ನಿಧಾನಗತಿಯ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟಕರವಾಗಿತ್ತು. ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಸ್ಟೈಲಿಶ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಖಾತೆ ತೆರೆಯದೇ ಪೆವಿಲಿಯನ್ ಹಾದಿ ಹಿಡಿದರು.
ಫೈನಲ್ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ 21 ರನ್ ಗಳಿಸಿದ್ದರು. ಕೌರ್ ಸ್ವಲ್ಪ ಸಮಯದ ಬ್ಯಾಟಿಂಗ್‌ನ ನಂತರ ಲಯಕ್ಕೆ ಬರುತ್ತಿದ್ದಂತೆ ತೋರಿತು. ಆದರೆ ಅವರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಔಟಾದರು. ದೀಪ್ತಿ ಶರ್ಮಾ 16 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಹರ್ಲೀನ್ ಸಾಕಷ್ಟು ಡಾಟ್ ಬಾಲ್‌ಗಳನ್ನು ಆಡಿದ್ರೂ ಸಹ ನಿಧಾನಗತಿಯ ಪಿಚ್‌ನಲ್ಲಿ ಹೆಚ್ಚಿನ ಹೊಡೆತಗಳನ್ನು ಹೊಡೆಯಲು ಸಾಧ್ಯವಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಹರ್ಲೀನ್ ಅಂತಿಮ ಓವರ್‌ನಲ್ಲಿ ತನ್ನ ವಿಕೆಟ್ ಅನ್ನು ಕಳೆದುಕೊಂಡು ಪೆವಿಲಿಯನ್ ಸೇರಿದರು.
ಭಾರತ ಮಹಿಳಾ ತಂಡ ನಿಗದಿತ 20 ಓವರ್ಗಳಿಗೆ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಕೇವಲ 109 ರನ್ ಗಳಿಸಿತು. ತಂಡದ ಪರ ಸ್ಮೃತಿ ಮಂಧಾನ 0 ರನ್, ಜೆಮಿಮಾ ರಾಡ್ರಿಗಸ್ 11 ರನ್, ಹರ್ಲೀನ್ ಡಿಯೋಲ್ 46 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 21 ರನ್, ದೀಪ್ತಿ ಶರ್ಮಾ 16 ರನ್ ಮತ್ತು ಪೂಜಾ ವಸ್ತ್ರಾಕರ್ 1 ರನ್ ಗಳಿಸಿ ಅಜೇರಾಗಿ ಉಳಿದರು. ದಕ್ಷಿಣ ಆಫ್ರಿಕಾ ಪರ ನಾನ್ಕುಲುಲೆಕೊ ಮ್ಲಾಬಾ 2 ವಿಕೆಟ್ ಕಬಳಿಸಿದ್ರೆ, ಅಯಾಬೊಂಗಾ ಖಾಕಾ ಮತ್ತು ನಾಯಕಿ ಸುನೆ ಲೂಸ್ ತಲಾ ಒಂದೊಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಗೆಲುವು: ಭಾರತ ಮಹಿಳಾ ತಂಡ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಆಟಗಾರರು ಸೇರಿದಂತೆ ಲಾರಾ ವೊಲ್ವಾರ್ಡ್ಟ್, ತಜ್ಮಿನ್ ಬ್ರಿಟ್ಸ್, ಲಾರಾ ಗುಡಾಲ್, ನಾಯಕಿ ಸುನೆ ಲೂಸ್, ಆನ್ನೆರಿ ಡೆರ್ಕ್ಸೆನ್ ಸೇರಿದಂತೆ ದಕ್ಷಿಣ ಆಫ್ರಿಕಾ ತಂಡ 66 ರನ್ಗಳಿಗೆ ಐದು ವಿಕೆಟ್‌ಗಳು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಆಗ ತಂಡಕ್ಕೆ ಆಸರೆಯಾಗಿದ್ದೆ ಚೋಲೆ ಟ್ರಯಾನ್. ಭಾರತ ಮಹಿಳಾ ತಂಡದ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದರು.
ಆರನೇ ವಿಕೆಟ್‌ಗೆ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು ಕೇವಲ 32 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 57 ರನ್‌ಗಳನ್ನು ಕಲೆ ಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಒಟ್ಟಿನಲ್ಲಿ ದಕ್ಷಿಣ ಆಫ್ರಿಕಾ ತಂಡ 18 ಓವರ್ಗಳಿಗೆ ಐದು ವಿಕೆಟ್‌ಗಳ ನಷ್ಟಕ್ಕೆ 113 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ತಂಡದ ಪರ ಲಾರಾ ವೊಲ್ವಾರ್ಡ್ಟ್ 0 ರನ್, ತಜ್ಮಿನ್ ಬ್ರಿಟ್ಸ್ 8 ರನ್, ಲಾರಾ ಗುಡಾಲ್ 7 ರನ್, ನಾಯಕಿ ಸುನೆ ಲೂಸ್ 12 ರನ್, ಆನ್ನೆರಿ ಡೆರ್ಕ್ಸೆನ್ 8 ರನ್, ಚೋಲೆ ಟ್ರಯಾನ್ 57 ರನ್ ಮತ್ತು ನಾಡಿನ್ ಡಿ ಕ್ಲರ್ಕ್ 17 ರನ್ ಕಲೆ ಹಾಕಿ ತಂಡದ ಗೆಲುವಿಗೆ ಶ್ರಮವಹಿಸಿದರು. ಭಾರತ ತಂಡದ ಪರ ಸ್ನೇಹ ರಾಣಾ ತಮ್ಮ ನಾಲ್ಕು ಓವರ್‌ಗಳಲ್ಲಿ 21 ರನ್‌ಗಳನ್ನು ನೀಡಿ 2 ವಿಕೆಟ್ ಪಡೆದರು, ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಒಂದೊಂದು ವಿಕೆಟ್ ಪಡೆದರು.
ತ್ರಿಕೋನ ಸರಣಿಯಲ್ಲಿ ಭಾರತದ ಪಯಣ: ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಭಾರತ ಎರಡು ಬಾರಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು.
ಓದಿ: ವಿಶ್ವದಾಖಲೆಗೆ 7 ರೇಟಿಂಗ್ಸ್ ಹಿಂದಿರುವ ಸೂರ್ಯಕುಮಾರ್..910 ಅಂಕ ಪಡೆದ ಭಾರತದ ಮೊದಲ ಕ್ರಿಕೆಟಿಗ