ನವದೆಹಲಿ: ಇಂಗ್ಲೆಂಡ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೆಣಸಾಟಕ್ಕೆ ಸಜ್ಜಾಗುತ್ತಿದ್ದರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಸ್ಟಾರ್ ಬ್ಯಾಟರ್ ಆಗಿರುವ ರುತುರಾಜ್ ಗಾಯಕ್ವಾಡ್ ಅವರು ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಶನಿವಾರ ಕಾಲಿಟ್ಟರು. ಮದುವೆ ಸಂಭ್ರಮದ ಕೆಲವು ಚಿತ್ರಗಳನ್ನು ಗಾಯಕ್ವಾಡ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆಸೀಸ್ ಮತ್ತು ಭಾರತ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಐಪಿಎಲ್ನಲ್ಲಿ ಮಿಂಚು ಹರಿಸಿದ್ದ ಸಿಎಸ್ಕೆ ತಂಡದ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದರು. ಬಳಿಕ ವಿವಾಹ ಕಾರಣಕ್ಕಾಗಿ ತಂಡದಿಂದ ಹೊರಗುಳಿದಿದ್ದರು. ಶನಿವಾರ ಮದುವೆ ಕಾರ್ಯಕ್ರಮ ನಡೆದಿದೆ. ಟೀಂ ಇಂಡಿಯಾದ ಯುವ ಬ್ಯಾಟರ್ ತಮ್ಮ ಜೀವನದ ಮತ್ತೊಂದು ವಿಶೇಷ ಇನಿಂಗ್ಸ್ ಆರಂಭಿಸಿದರು.
ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಗಾಯಕ್ವಾಡ್, "ಕ್ರಿಕೆಟ್ ಪಿಚ್‌ನಿಂದ ವಿಶೇಷ ವೇದಿಕೆಯವರೆಗೆ ನಮ್ಮ ಪ್ರಯಾಣ ಪ್ರಾರಂಭವಾಗಿದೆ!" ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟಿಗರು, ಗಣ್ಯರು ಶುಭಾಶಯ ಕೋರಿದ್ದಾರೆ.
ಗಾಯಕ್ವಾಡ್ ಸಂಗಾತಿಯೂ ಕ್ರಿಕೆಟರ್: ಯುವ ಬ್ಯಾಟರ್ ಕೈ ಹಿಡಿದಿರುವ ಉತ್ಕರ್ಷ ಪವಾರ್ ವೃತ್ತಿಪರ ಕ್ರಿಕೆಟ್ ಆಟಗಾರ್ತಿ. 24 ವರ್ಷದ ಉತ್ಕರ್ಷ ಪುಣೆ ನಿವಾಸಿಯಾಗಿದ್ದು, ಮಹಾರಾಷ್ಟ್ರ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ಬಲಗೈ ಬ್ಯಾಟರ್, ಬೌಲರ್ ಆಗಿರುವ ಇವರು 2021 ರಲ್ಲಿ ಲಿಸ್ಟ್ ಎ ಕ್ರಿಕೆಟ್ ಆಡಿದ್ದರು.
ಸದ್ಯ ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಐಪಿಎಲ್ 2023 ರ ಫೈನಲ್ ಗೆಲುವಿನ ನಂತರ ರುತುರಾಜ್ ಮತ್ತು ಉತ್ಕರ್ಷ ಒಟ್ಟಿಗೆ ಕಾಣಿಸಿಕೊಂಡಿದ್ದರು. ಉತ್ಕರ್ಷ ಅವರು ಎಂ.ಎಸ್. ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಭಾರಿ ಸುದ್ದಿಯಾಗಿತ್ತು.
ಸಿಎಸ್ಕೆ ಪರ ಮಿಂಚಿದ ಗಾಯಕ್ವಾಡ್: 16 ನೇ ಸೀಸನ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. ತಂಡದ ಆರಂಭಿಕ ಆಟಗಾರನಾಗಿದ್ದ ರುತುರಾಜ್ ಗಾಯಕ್ವಾಡ್ ಸೀಸನ್ ಪೂರ್ತಿ ಅದ್ಭುತವಾಗಿ ಬ್ಯಾಟ್ ಮಾಡಿದರು. ಸಿಎಸ್ಕೆ ಪರವಾಗಿ ಆಡಿದ 16 ಪಂದ್ಯಗಳಲ್ಲಿ 42.14 ಸರಾಸರಿಯಲ್ಲಿ 590 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧ ಶತಕಗಳಿವೆ. 92 ಗರಿಷ್ಠ ಸ್ಕೋರ್ ಆಗಿದೆ. ಸಹ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಜೊತೆ ಪಾಲುದಾರಿಕೆಯಲ್ಲಿ ಅತಿಹೆಚ್ಚು ರನ್ ಗಳಿಸಿದ ಜೋಡಿಯಾಗಿದೆ.
2019 ರಿಂದ ಐಪಿಎಲ್ ಆಡುತ್ತಿರುವ ಗಾಯಕ್ವಾಡ್, ಈವರೆಗೂ 1,797 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 14 ಅರ್ಧಶತಕಗಳೂ ಇದರಲ್ಲಿವೆ. ಇನ್ನು ಭಾರತದ ಪರವಾಗಿ 9 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಂದು ಅರ್ಧಶತಕದೊಂದಿಗೆ 135 ರನ್ ಗಳಿಸಿದ್ದಾರೆ. ಅಲ್ಲದೇ, ಒಂದು ಏಕದಿನ ಪಂದ್ಯವನ್ನೂ ಆಡಿದ್ದು, 19 ರನ್ ಗಳಿಸಿದ್ದರು.
ಇದನ್ನೂ ಓದಿ: ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳನ್ನು ಕೋಲ್ಕತ್ತಾದಿಂದ ವಿಮಾನದಲ್ಲಿ ಕರೆತಂದ ಸರ್ಕಾರ