ಮುಂಬೈ : ಪ್ಲೇ ಆಫ್ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್ ಇಂದು ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ವಿರುದ್ಧ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಕಾದಾಡಲಿದೆ. ಒಂದು ವೇಳೆ ಈ ಪಂದ್ಯವನ್ನು ಪಂಜಾಬ್ ಗೆದ್ದರೆ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ.
ಗುಜರಾತ್ ಟೈಟನ್ಸ್ ತಮ್ಮ ಮೊದಲ ಆವೃತ್ತಿಯಲ್ಲಿ ಅದ್ಭುತವಾಗಿ ಆಡುತ್ತಿದೆ. ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಎದುರಾಳಿಗಳನ್ನು ಹಿಮ್ಮೆಟ್ಟಿಸಿದೆ. ವೈಯಕ್ತಿವಾಗಿ ತಂಡದ ಆಟಗಾರರು ಒಂದಲ್ಲ ಒಂದು ಪಂದ್ಯದಲ್ಲಿ ಗೆಲುವಿನಲ್ಲಿ ತಂಡಕ್ಕೆ ಕೈಜೋಡಿಸುತ್ತಿದ್ದಾರೆ.
ಅವಕಾಶ ಪಡೆದ ಪ್ರತಿಯೊಬ್ಬ ಆಟಗಾರರ ತಂಡದ ಗೆಲುವಿನಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಹಾಗಾಗಿ, ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳಲಿದೆ.
ಇಡೀ ಟೂರ್ನಮೆಂಟ್ನಲ್ಲಿ ಟೈಟನ್ಸ್ ಅತ್ಯಂತ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದೆ. ಆದರೆ, ಸತತ ಜಯದ ನಡುವೆಯೂ ತಂಡದ ಬ್ಯಾಟಿಂಗ್ ದೌರ್ಬಲ್ಯ ಎದ್ದು ಕಾಣುತ್ತಿದೆ. ಆದರೂ ಆಳವಾದ ಬ್ಯಾಟಿಂಗ್ ಲೈನ್ಅಪ್ ತಂಡದ ಬಲವಾಗಿದ್ದು, 8 ಜಯಗಳಲ್ಲಿ 5 ಕೊನೆಯ ಓವರ್ನಲ್ಲಿ ಬಂದಿವೆ. ಇದರಲ್ಲಿ ರಶೀದ್ ಖಾನ್, ಮಿಲ್ಲರ್ ಮತ್ತು ತೆವಾಟಿಯಾ ಪಾತ್ರ ಮಹತ್ವದ್ದಾಗಿದೆ.
ಇನ್ನು ಪಂಜಾಬ್ ಪೇಪರ್ನಲ್ಲಿ ಬಲಿಷ್ಠ ಎಂದು ಕಂಡರು,ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರುತ್ತಿಲ್ಲ. ಟಿ20 ಕ್ರಿಕೆಟ್ನಲ್ಲಿ ಅನುಭವ ಇರುವ ಆಟಗಾರರಿದ್ದರೂ, ಕಳೆದ 4 ಪಂದ್ಯಗಳಲ್ಲಿ ಕೇವಲ 1 ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಒಟ್ಟಾರೆ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲು ಕಂಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ 115ಕ್ಕೆ ಆಲೌಟ್ ಆದರೆ, ಮತ್ತೊಂದು ಪಂದ್ಯದಲ್ಲಿ 154 ರನ್ಗಳನ್ನು ಚೇಸ್ ಮಾಡಲಾಗದೇ ಸೋಲು ಕಂಡಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅನುಭವಿಗಳಿರುವುದರಿಂದ ಇಂದಿನ ಪಂದ್ಯದಲ್ಲಿ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿಯುತ್ತಿದ್ದು, ನಾಯಕ ಮಯಾಂಕ್ ಮತ್ತು ಜಾನಿ ಬೈರ್ಸ್ಟೋವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನಾಡಬೇಕಿದೆ. ಇದೇ ಲೀಗ್ನ ಮೊದಲ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 190 ರನ್ಗಳ ಗುರಿ ನೀಡಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳಲ್ಲೂ ಸಿಕ್ಸರ್ ಸಿಡಿಸಿ ಟೈಟನ್ಸ್ಗೆ ಗೆಲುವು ತಂದುಕೊಟ್ಟಿದ್ದರು.
ಇದನ್ನೂ ಓದಿ:ಸನ್ ರೈಸರ್ಸ್ಗೆ ಏಟಿನ ಮೇಲೆ ಏಟು.. ಮತ್ತೆ ಸ್ಟಾರ್ ಆಲ್ರೌಂಡರ್ ತಂಡದಿಂದ ಹೊರಕ್ಕೆ