ಮುಂಬೈ: ರಾಜಸ್ಥಾನ್ ರಾಯಲ್ಸ್ ತಮಗೆ ಚೊಚ್ಚಲ ಐಪಿಎಲ್ ಟ್ರೋಫಿ ತಂದುಕೊಟ್ಟಿದ್ದ ಇತ್ತೀಚಿಗೆ ನಿಧನರಾಗಿರುವ ಆಸೀಸ್ ದಂತಕತೆ ಶೇನ್ ವಾರ್ನ್ ಅವರ ಅಸಾಧಾರಣ ಜೀವನವನ್ನು ಸ್ಮರಿಸಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆಯುವ ಪಂದ್ಯದಲ್ಲಿ ಈ ಗೌರವ ಅರ್ಪಣೆ ಕಾರ್ಯಕ್ರಮ ಜರುಗಲಿದೆ.
ವಾರ್ನ್ ಉದ್ಘಾಟನಾ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡು ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿ ಟ್ರೋಫಿ ತಂದುಕೊಟ್ಟಿದ್ದರು. 14 ವರ್ಷಗಳ ಹಿಂದೆ ತಂಡದ ವಿಜಯೋತ್ಸವದ ಪ್ರಮುಖ ರೂವಾರಿಯಾಗಿದ್ದ ತನ್ನ ಮೊದಲ ನಾಯಕನಿಗೆ ಗೌರವ ಸಲ್ಲಿಸುವುದಾಗಿ ಮಾಜಿ ಫ್ರಾಂಚೈಸಿ ತಿಳಿಸಿದೆ. ವಾರ್ನ್ ಅವರ ಸಹೋದರ ಜೇಸನ್ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಾಗುವುದಕ್ಕೆ ಫ್ರಾಂಚೈಸಿಯ ಆಹ್ವಾನವನ್ನು ಸ್ವೀಕರಿಸಿರುವುದಾಗಿ ರಾಯಲ್ಸ್ ತಿಳಿಸಿದೆ.
ವಾರ್ನ್ ಅವರು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದ ಅದೇ ಕ್ರೀಡಾಂಗಣದಲ್ಲಿ ಇಡೀ ಕ್ರಿಕೆಟ್ ಜಗತ್ತು ಗೌರವವನ್ನು ಸಲ್ಲಿಸಲು ಮತ್ತು ಅವರ ಜೀವನವನ್ನು ಸ್ಮರಿಸಲು ಒಟ್ಟಾಗಿ ಸೇರುವುದನ್ನು ನೋಡುವುದಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಶೋಕಾಚರಣೆಯ ಸಂದರ್ಭವಲ್ಲ, ಆದರೆ ಮಹಾನ್ ವ್ಯಕ್ತಿಯನ್ನು ಸ್ಮರಿಸಲು ಮತ್ತು ಕ್ರಿಕೆಟ್ಗೆ ಅವರ ಅಪಾರ ಕೊಡುಗೆಗಾಗಿ ಮತ್ತು ಮೈದಾನ ಹೊರಗೆ ಮತ್ತು ಒಳಗೆ ಪ್ರಪಂಚದಾದ್ಯಂತದ ಸಾವಿರಾರು ಜನರ ಮೇಲೆ ಪ್ರಭಾವ ಬೀರಿರುವ ಅವರಿಗೆ ವಂದನೆಗಳನ್ನು ಅರ್ಪಿಸಲು ಫ್ರಾಂಚೈಸಿ ಬಯಸುತ್ತದೆ ಎಂದು ಆರ್ಆರ್ ತಿಳಿಸಿದೆ.
ಈ ಆಚರಣೆಯ ಮುಂದಾಳತ್ವವನ್ನು ರಾಜಸ್ಥಾನ್ ರಾಯಲ್ಸ್ ವಹಿಸಿಕೊಂಡಿದ್ದು, ಇದಕ್ಕೆ ಬಿಸಿಸಿಐ ಬೆಂಬಲ ನೀಡಲಿದೆ. ಆ ದಿನ ರಾಜಸ್ಥಾನ್ ರಾಯಲ್ಸ್ ತಂಡ SW23 ಎಂಬ ಸಂಖ್ಯೆಯನ್ನು ಹೊಂದಿರುವ ವಿಶೇಷ ಜರ್ಸಿಯನ್ನು ತೊಟ್ಟು ಆಸ್ಟ್ರೇಲಿಯಾ ಲೆಜೆಂಡರಿ ಕ್ರಿಕೆಟಿಗನಿಗೆ ಶ್ರದ್ಧಾಂಜಲಿ ಅರ್ಪಿಸಲಿದೆ.
ಇದನ್ನೂ ಓದಿ:IPL: ಕೋಟಿಗಟ್ಟಲೆ ಹಣ ಪಡೆದು ಕಳಪೆ ಪ್ರದರ್ಶನ ತೋರುತ್ತಿರುವ ಆಟಗಾರರು ಇವರೇ ನೋಡಿ..