ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಪ್ರಧಾನ ಸಹಭಾಗಿತ್ವವನ್ನು ಘೋಷಿಸಿದೆ. ಎಲೆಕ್ಟ್ರಿಕ್ ವೈರ್ಗಳು ಮತ್ತು ಕೇಬಲ್ ತಯಾರಿಕೆಯಲ್ಲಿ ದೇಶದ ಮುಂಚೂಣಿ ಉತ್ಪಾದಕ ಕಂಪನಿಯಾಗಿರುವ ಕೆಇಐ ಇಂಡಸ್ಟ್ರೀಸ್ ಮುಂದಿನ ಮೂರು ವರ್ಷಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಪ್ರಧಾನ ಪಾಲುದಾರಿಕೆ ಒಪ್ಪಂದ ಪ್ರಕಟಿಸಿದೆ.
ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಜರ್ಸಿಯ ಹಿಂಭಾಗದಲ್ಲಿ ಕೆಇಐ ಇಂಡಸ್ಟ್ರೀಸ್ ಲೋಗೋ ಇರಲಿದೆ. ಅಲ್ಲದೇ ತನ್ನ ಬ್ರ್ಯಾಂಡ್ ಪ್ರಚಾರ ಉದ್ದೇಶಗಳಿಗೆ ಆರ್‌ಸಿಬಿ ತಂಡದ ಲೋಗೋ ಮತ್ತು ಆಟಗಾರರ ಚಿತ್ರಗಳನ್ನ ಬಳಸಿಕೊಳ್ಳುವ ಹಕ್ಕನ್ನ ಕೆಇಐ ಹೊಂದಲಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಗುಪ್ತಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸೀಸ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಮಹಿಪಾಲ್ ಲಾಮ್ರೋರ್ ಜೊತೆ ಕೆಇಐ ಲೋಗೋವನ್ನೊಳಗೊಂಡ ತಂಡದ ಜರ್ಸಿಯನ್ನು ಅನಾವರಣಗೊಳಿಸಿದರು.
ಎಲೆಕ್ಟ್ರಿಕ್ ವೈರ್, ಕೇಬಲ್ ಉತ್ಪಾದನಾ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕೆಇಐ ಇಂಡಸ್ಟ್ರೀಸ್ ಕ್ರಿಕೆಟ್ ಕ್ಷೇತ್ರಕ್ಕೆ 2016ರಲ್ಲಿ ಪಾದಾರ್ಪಣೆಗೈದಿದ್ದು, ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡದ ಜೊತೆಗೆ ಸಹಭಾಗಿತ್ವ ಹೊಂದಿತ್ತು. ಪ್ರೋ ಕಬಡ್ಡಿ ಲೀಗ್ ಹಾಗೂ ಫುಟ್‌ಬಾಲ್ ಲೀಗ್‌ಗಳಲ್ಲಿಯೂ ಕೆಇಐ ಸಹಭಾಗಿತ್ವ ಹೊಂದಿದೆ.
ಆರ್‌ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆವೃತ್ತಿಯ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಏಪ್ರಿಲ್ 2 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಕಳೆದ ವರ್ಷ, ಆರ್‌ಸಿಬಿ ಪ್ಲೇ-ಆಫ್‌ಗೆ ಅರ್ಹತೆ ಗಳಿಸಿ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್‌ಗಳ ಸೋಲು ಕಂಡಿತ್ತು.
ಐಪಿಎಲ್ 2023 ಹರಾಜಿನಲ್ಲಿ ಖರೀದಿಸಿದ ಆಟಗಾರರು: ರೀಸ್ ಟೋಪ್ಲಿ (1.9 ಕೋಟಿ), ಹಿಮಾಂಶು ಶರ್ಮಾ (20 ಲಕ್ಷ), ವಿಲ್ ಜ್ಯಾಕ್ಸ್ (3.2 ಕೋಟಿ), ಮನೋಜ್ ಭಾಂಡಗೆ (20 ಲಕ್ಷ), ರಾಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ).
ಉಳಿಸಿಕೊಂಡಿರುವ ಆಟಗಾರರು : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್ಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.
ಇದನ್ನೂ ಓದಿ: ಡೆಲ್ಲಿಗೆ ರಿಷಬ್ ಪಂತ್ ಬದಲಿಗೆ ಇವರು.. ಬ್ಯಾಟಿಂಗ್, ಕೀಪಿಂಗ್ ಮಾಡಬಲ್ಲ ಮುಂದಿನ ಇಂಡಿಯನ್ ಸ್ಟಾರ್