ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟರ್ ರಾಸ್ ಟೇಲರ್ ಅವರ ಆತ್ಮಚರಿತ್ರೆ 'ಬ್ಲ್ಯಾಕ್ ಅಂಡ್ ವೈಟ್' ಪುಸ್ತಕದಲ್ಲಿ ಭಾರತದ ಲೆಜೆಂಡರಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಬಗ್ಗೆ ಗುಣಗಾನ ಮಾಡಲಾಗಿದೆ. ಸೌಮ್ಯ ಸ್ವಭಾವದ ದ್ರಾವಿಡ್ರನ್ನು ರಾಸ್ ಹುಲಿಗೆ ಹೋಲಿಸಿ ಬಣ್ಣಿಸಿದ್ದಾರೆ. ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಮತ್ತು ಭಾರತದ ಆಟಗಾರರ ಖ್ಯಾತಿಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಇದಕ್ಕಾಗಿ ರಾಸ್ ಟೇಲರ್ ದ್ರಾವಿಡ್ ಅವರ ಜೊತೆಗೂಡಿ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದಾಗಿನ ಪ್ರಸಂಗವೊಂದನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಜೊತೆಗೂಡಿ ನಾನು ರಣಥಂಬೋರ್ ಉದ್ಯಾನವನಕ್ಕೆ ಭೇಟಿ ನೀಡಿದ್ದೆ. ಆಗ ನಾನು ಹುಲಿಯನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದೆ. ಆಗ ರಾಹುಲ್ ಅವರು ಇಲ್ಲ. ನಾನಿಲ್ಲಿಗೆ 21 ಸಲ ಬಂದಿದ್ದೇನೆ. ಆದರೆ, ಒಮ್ಮೆಯೂ ಹುಲಿ ಕಂಡಿಲ್ಲ ಎಂದರು.
ಸ್ವಲ್ಪ ದೂರದ ಬಳಿಕ 100 ಮೀಟರ್ ಅಂತರದಲ್ಲಿ ಹುಲಿಯೊಂದು ಬಂಡೆಯ ಮೇಲೆ ಮಲಗಿತ್ತು. ಇದನ್ನು ಕಂಡು ಪುಳಕಿತರಾದೆವು. ಅಚ್ಚರಿಯ ಘಟನೆ ಎಂದರೆ, ಹುಲಿ ನೋಡಲು ಬಂದಿದ್ದ ಪ್ರವಾಸಿಗರು ರಾಹುಲ್ ದ್ರಾವಿಡ್ರನ್ನು ಕಂಡಾಕ್ಷಣ ಎಲ್ಲರೂ ತಮ್ಮ ಕ್ಯಾಮೆರಾಗಳನ್ನು ಇವರತ್ತ ನೆಟ್ಟರು. ಕಾಡು ಹುಲಿಯನ್ನು ಮರೆತೇ ಬಿಟ್ಟರು.
ಜನರಿಗೆ ಕಾಡು ಹುಲಿಗಿಂತ ರಾಹುಲ್ ದ್ರಾವಿಡ್ ಅವರನ್ನೇ ನೋಡುವುದರಲ್ಲಿ ಹೆಚ್ಚು ಆಸ್ಥೆ ವಹಿಸಿದರು. ಪ್ರಪಂಚದಾದ್ಯಂತ ಸುಮಾರು 4,000 ಹುಲಿಗಳಿವೆ. ಆದರೆ, ರಾಹುಲ್ ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ನ ಏಕೈಕ ಹುಲಿ ಎಂದು ಅವರು ಬಣ್ಣಿಸಿ ಬರೆದಿದ್ದಾರೆ. ರಾಸ್ ಟೇಲರ್ ಅವರು ಬ್ಲ್ಯಾಕ್ ಅಂಡ್ ವೈಟ್ ಪುಸ್ತಕದಲ್ಲಿ ರಾಜಸ್ಥಾನ ತಂಡದ ಮಾಲೀಕರು ತಮ್ಮ ಕಪಾಳಕ್ಕೆ ಹೊಡೆದ ಬಗ್ಗೆ, ನ್ಯೂಜಿಲ್ಯಾಂಡ್ ತಂಡದಲ್ಲಿದ್ದಾಗ ತಮಗಾದ ಜನಾಂಗೀಯ ನಿಂದನೆ ಬಗ್ಗೆಯೂ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: IPL ತಂಡದ ಮಾಲೀಕರಿಂದ ಮೂರ್ನಾಲ್ಕು ಸಲ ಕಪಾಳಮೋಕ್ಷ.. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಸ್ ಟೇಲರ್