ಲಂಡನ್ : ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡದ ತಂತ್ರಗಾರಿಕೆಯ ಲೋಪದೋಷಗಳನ್ನು ಒಪ್ಪಿಕೊಂಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಭಾರತದ ಕೆಳ ಕ್ರಮಾಂಕವನ್ನು ಲಘುವಾಗಿ ಪರಿಗಣಿಸಿ ತಪ್ಪು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ತನ್ನ ಎರಡನೇ ಇನ್ನಿಂಗ್ಸ್ ವೇಳೆ ಭಾರತ ತಂಡ 209ಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕಣಕ್ಕಿಳಿದಿದ್ದ ಬುಮ್ರಾ(34) ಮತ್ತು ಶಮಿ(56) 9ನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜೊತೆಯಾಟ ನಡೆಸಿ ಆಂಗ್ಲರ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿದರು.
272 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ಭಾರತದ ವೇಗಿಗಳ ದಾಳಿಗೆ ತತ್ತರಿಸಿ 120 ರನ್ಗಳಿಗೆ ಆಲೌಟ್ ಆಗುವ ಮೂಲಕ 151 ರನ್ಗಳಿಂದ ಸೋಲು ಕಂಡರು. ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ಬುಮ್ರಾ 3, ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ನಾಯಕ ರೂಟ್, "ನಾಯಕನಾಗಿ ನನ್ನ ಹೆಗಲ ಮೇಲೆ ಈ ಸೋಲಿನ ಹೊರೆ ಬೀಳುತ್ತದೆ ಎಂದು ಭಾವಿಸುತ್ತೇನೆ. ಆದರೆ, ಈ ಪಂದ್ಯದಲ್ಲಿ ನಾನು ಇನ್ನೂ ಜಾಣ್ಮೆಯಿಂದ ಸ್ವಲ್ಪ ವಿಭಿನ್ನವಾಗಿ ಕೆಲಸಗಳನ್ನು ಮಾಡಬಹುದಿತ್ತು. ಆದರೆ, ನಾವು ವಿಫಲರಾದೆವು" ಎಂದು ಹೇಳಿದ್ದಾರೆ.
ಜೊತೆಗೆ ನಾವು ಭಾರತದ ಕೆಳ ಕ್ರಮಾಂಕವನ್ನು ಕಡೆಗಣಿಸಿದೆವು, ಬುಮ್ರಾ ಮತ್ತು ಶಮಿ ಅವರ ಜೊತೆಯಾಟ ಪಂದ್ಯದಲ್ಲಿ ನಿರ್ಣಾಯಕವಾಯಿತು. ಅಲ್ಲದೆ ಈ ಪಂದ್ಯದಲ್ಲಿ ನಾನು ಅತ್ಯುತ್ತಮ ತಂತ್ರಗಾರಿಕೆಯನ್ನು ಪ್ರಯೋಗಿಸಲು ವಿಫಲನಾದೆ ಎನ್ನುವುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಇದೇ ನಮ್ಮನ್ನು ಸಂಕಷ್ಟಕ್ಕೀಡು ಮಾಡಿತು"ಎಂದು ರೂಟ್ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ನೀವು ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ, ನಾವು 11 ಜನ ತಿರುಗಿ ಬೀಳುತ್ತೇವೆ : ಕನ್ನಡಿಗ ಕೆ ಎಲ್ ರಾಹುಲ್