ಚೆನ್ನೈ: ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲು ನನ್ನ ಪ್ರದರ್ಶನಕ್ಕಿಂತ ನಾಯಕ ರೋಹಿತ್ ಅವರ ನಾಯಕತ್ವ ಮಂತ್ರದಿಂದ ಸಾಧ್ಯವಾಯಿತು ಎಂದು 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ರಾಹುಲ್ ಚಹರ್ ಅಭಿಪ್ರಾಯಪಟ್ಟಿದ್ದಾರೆ.
ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ್ದ ಮುಂಬೈ 152 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಒಂದು ಹಂತದಲ್ಲಿ 104ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ, ರಾಹುಲ್ ಚಹರ್ ದಾಳಿಗೆ ಸಿಲುಕಿ 122 ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಕೊನೆಗೆ 20 ಓವರ್ಗಳಲ್ಲಿ 142 ರನ್ಗಳಿಸಲಷ್ಟೇ ಶಕ್ತವಾಗಿ 10 ರನ್ಗಳ ಸೋಲು ಕಂಡಿತು.
27ರನ್ಗಳಿಗೆ 4 ವಿಕೆಟ್ ಪಡೆದಿದ್ದ ರಾಹುಲ್ ಚಹರ್, ಗೆಲುವಿನ ಶ್ರೇಯವನ್ನು ನಾಯಕ ರೋಹಿತ್ಗೆ ಅರ್ಪಿಸಿದ್ದಾರೆ. ರೋಹಿತ್ ನನಗೆ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಲು ಹೇಳಿದರು, ಒಮ್ಮೊಮ್ಮೆ(ನೆಟ್ಸ್‌ನಲ್ಲಿ) ನಿನ್ನ ಎಸೆತಗಳನ್ನು ಎದುರಿಸಲು ನನಗೇ ಕಷ್ಟವಾಗುತ್ತಿತ್ತು. ಅವರೂ (ಕೆಕೆಆರ್) ಕೂಡ ಅದೇ ಭಾವನೆಯಲ್ಲಿರುತ್ತಾರೆ. ನಿನ್ನ ಗಮನವನ್ನು ಅದರ ಕಡೆಗೆ ನೀಡು, ಉತ್ತಮ ಲೆಂತ್ ಮತ್ತು ಹೆಚ್ಚು ತಿರುವು ಪಡೆಯುವುದಕ್ಕೆ ಪ್ರಯತ್ನಿಸು ಎಂದು ತಿಳಿಸಿದರು ಎಂದು ವರ್ಚುಯಲ್ ಮಾಧ್ಯಮ ಗೋಷ್ಠಿಯಲ್ಲಿ ಚಹರ್ ತಿಳಿಸಿದ್ದಾರೆ.
ಇಂತಹ ಪಂದ್ಯದಲ್ಲಿ ಪಂದ್ಯ ಗೆಲ್ಲಿಸುವವರು ಸ್ಪಿನ್ನರ್ಗಳಾಗಿರುತ್ತಾರೆ ಎಂಬುದು ನನಗೆ ತಿಳಿದಿತ್ತು. ಹಾಗಾಗಿ ನಾನು ಆತ್ಮವಿಶ್ವಾಸದಿಂದ ಇದ್ದೆ, ಅಲ್ಲದೇ ನೆಟ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಅಂತಹ ದಿಗ್ಗಜರಿಗೆ ಬೌಲಿಂಗ್ ಮಾಡಿದ್ದೆ. ಅಲ್ಲದೇ ಭಾರತದ ಟಾಪ್ ಬ್ಯಾಟ್ಸ್ಮನ್ಗಳಿಗೂ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದೆ. ನೀವು ಈ ಕೆಲಸವನ್ನು ಮಾಡಿದ್ರೆ, ಪಂದ್ಯಗಳಲ್ಲಿ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಒತ್ತಡ ಇರುವುದಿಲ್ಲ ಎಂಬುದು ನನ್ನ ತಲೆಯಲ್ಲಿತ್ತು. ಜೊತೆಗೆ ರೋಹಿತ್ ಅವರ ಸ್ಫೂರ್ತಿದಾಯಕ ಮಾತುಗಳು ಕೂಡ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು ಎಂದು ಪಂದ್ಯಶ್ರೇಷ್ಠ ವಿಜೇತ ಹೇಳಿದ್ದಾರೆ.
ಇದನ್ನು ಓದಿ:ಏಕದಿನ ರ‍್ಯಾಂಕಿಂಗ್: 1,258 ದಿನಗಳ ನಂತರ ಅಗ್ರಪಟ್ಟ ಕಳೆದುಕೊಂಡ ಕೊಹ್ಲಿ, ನಂ 1 ಸ್ಥಾನಕ್ಕೇರಿದ ಬಾಬರ್