ಮೊಹಾಲಿ: ಭಾರತ ಟೆಸ್ಟ್ ತಂಡದಲ್ಲಿ ದಶಕದ ಕಾಲ ಬ್ಯಾಟಿಂಗ್ ಬಲವಾಗಿದ್ದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಸ್ಥಾನ ತುಂಬುವುದು ಅಷ್ಟು ಸುಲಭವಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗುರುವಾರ ಹೇಳಿದರು.
ಶುಕ್ರವಾರ ಮೊಹಾಲಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕಳಪೆ ಫಾರ್ಮ್ ಕಾರಣದಿಂದ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಬಿದ್ದ ಹಿರಿಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಜಾಗಕ್ಕೆ ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಬಗ್ಗೆ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ತಂಡದ ಭವಿಷ್ಯದ ಯೋಜನೆಗಳಲ್ಲಿದ್ದಾರೆ ಮತ್ತು ಅವರ ಜಾಗವನ್ನು ತುಂಬುವುದು ಸುಲಭವಲ್ಲ ಎಂದರು.
"ಹೊಸಬರು ಯಾರೇ ಬಂದರೂ ಅವರ ಸ್ಥಾನದಲ್ಲಿ ಆಡುವುದು ಸುಲಭದ ಮಾತಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪೂಜಾರ ಮತ್ತು ರಹಾನೆ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರಿಬ್ಬರೂ ಇಷ್ಟು ವರ್ಷಗಳಲ್ಲಿ ತಂಡಕ್ಕೆ ನೀಡಿರುವ ಕೊಡುಗೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕಠಿಣ ಪರಿಶ್ರಮದಿಂದ 80-90 ಟೆಸ್ಟ್ಗಳನ್ನಾಡಿದ್ದಾರೆ, ವಿದೇಶದಲ್ಲಿ ಪಡೆದ ಗೆಲುವುಗಳು, ಭಾರತ ಟೆಸ್ಟ್ನಲ್ಲಿ ನಂಬರ್ 1 ಸ್ಥಾನಕ್ಕೇರಲು ಮತ್ತು ಈ ಹಂತಕ್ಕೆ ತಂಡ ತಲುಪಲು ನಮಗೆ ನೆರವಾಗಿದ್ದಾರೆ ಮತ್ತು ಅದರಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ" ಎಂದು ರೋಹಿತ್ ಮಾಧ್ಯಮಗೋಷ್ಠಿಯಲ್ಲಿ ಕೊಂಡಾಡಿದರು.
ಭವಿಷ್ಯದಲ್ಲಿ ಅವರಿಬ್ಬರ ಕಡೆ ನೋಡದಿರುವುದಕ್ಕೆ ಕಾರಣಗಳಿಲ್ಲ. ಪೂಜಾರ ಮತ್ತು ರಹಾನೆ ನಮ್ಮ ಭವಿಷ್ಯದ ಯೋಜನೆಗಳಲ್ಲಿ ಇದ್ದಾರೆ. ಅಯ್ಕೆ ಸಮಿತಿ ಕೂಡ ಸದ್ಯಕ್ಕೆ ಮಾತ್ರ ಅವರನ್ನು ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮೊಹಾಲಿ ಟೆಸ್ಟ್: ಕಪಿಲ್ ದೇವ್ ಸೇರಿದಂತೆ ದಿಗ್ಗಜರ ದಾಖಲೆ ಪುಡಿಗಟ್ಟುವತ್ತ ಅಶ್ವಿನ್ ಚಿತ್ತ