ಅಹ್ಮದಾಬಾದ್ : ಅಧಿಕೃತವಾಗಿ ಭಾರತ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ 2ನೇ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಮೂಲಕ ಎಂಎಸ್ ಧೋನಿ ಯೋಜನೆಯನ್ನು ಅನುಸರಿಸಿದರಾದರೂ ಮೊದಲ ಪಂದ್ಯದಲ್ಲಿ ಪಂತ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.
ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯಕ್ಕೆ ಉಪನಾಯಕ ಕೆ ಎಲ್ ರಾಹುಲ್ ಆಗಮನವಾಗಿದ್ದರಿಂದ ಬಹುತೇಕರು ಅವರೇ ರೋಹಿತ್ ಶರ್ಮಾರ ಜೊತೆಗೆ ಇನ್ನಿಂಗ್ಸ್ ಆರಂಭಿಸಬಹುದು ಎನ್ನಲಾಗಿತ್ತು.
ಆದರೆ, ಕೊನೆಯ ಕ್ಷಣದಲ್ಲಿ ರೋಹಿತ್ ಹೊಸ ತಿರುವುಕೊಟ್ಟು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದರು. ಆದರೆ, ಬಡ್ತಿ ಸಿಕ್ಕ ಮೊದಲ ಅವಕಾಶವನ್ನು ರಿಷಭ್ ಪಂತ್ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಅವರು 34 ಎಸೆತಗಳಲ್ಲಿ 3 ಬೌಂಡರಿ ಸಹಿತ ಕೇವಲ 18 ರನ್ಗಳಿಸಿ ಔಟಾದರು.
ರೋಹಿತ್ ಶರ್ಮಾಗೆ ಬಡ್ತಿ ನೀಡಿ ಯಶಸ್ವಿಯಾಗಿದ್ದ ಧೋನಿ
ವಿಶ್ವದ ಸ್ಫೋಟಕ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮಾ 2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು 2013ರವರೆಗೆ ಕೇವಲ 2 ಶತಕ ಮಾತ್ರ ಸಿಡಿಸಿ ಸರಾಸರಿ ಆಟಗಾರನಾಗಿದ್ದರು. ಅಲ್ಲಿಯವರೆಗೆ 87 ಪಂದ್ಯಗಳಿಂದ ವಿವಿಧ ಕ್ರಮಾಂಕದಲ್ಲಿ 2 ಶತಕಗಳ ಸಹಿತ 1967 ರನ್ಗಳಿಸಿದ್ದರು.
ಆದರೆ, ಧೋನಿ 2013ರ ಚಾಂಪಿಯನ್ ಟ್ರೋಪಿಯಲ್ಲಿ ರೋಹಿತ್ ಶರ್ಮಾರನ್ನು ಆರಂಭಿಕನಾಗಿ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡರು. ಅಲ್ಲಿಂದ ಹಿಂತಿರುಗಿ ನೋಡದ ರೋಹಿತ್ ಆರಂಭಿಕನಾಗಿ 32 ಅರ್ಧಶತಕ, 27 ಶತಕಗಳ ಸಹಿತ 7298 ರನ್ಗಳಿಸಿ ವಿಶ್ವದ ಸ್ಟಾರ್ ಬ್ಯಾಟರ್ಗಳಲ್ಲಿ ಒಬ್ಬರಾಗಿ ಮೆರೆಯುತ್ತಿದ್ದಾರೆ.
ಇದನ್ನು ಓದಿ:ICC ODI batting rankings: 2 ಮತ್ತು 3ರಲ್ಲಿ ಮುಂದುವರಿದ ಕೊಹ್ಲಿ-ರೋಹಿತ್ ಜೋಡಿ