ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ರೋಚಕ ಸೂಪರ್ ಓವರ್ ಹಣಾಹಣಿಯಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿದ ಭಾರತ 3-0 ವೈಟ್ವಾಶ್ನೊಂದಿಗೆ ಟಿ20 ಸರಣಿ ಜಯಿಸಿದೆ. ಈ ನಡುವೆ, ರೋಹಿತ್ ಶರ್ಮಾ ಎರಡೂ ಸೂಪರ್ ಓವರ್ಗಳಲ್ಲೂ ಬ್ಯಾಟಿಂಗ್ ಮಾಡಿರುವುದು ವಿವಾದ, ಚರ್ಚೆಗೆ ಗ್ರಾಸವಾಗಿದೆ.
ಅಜೇಯ ಶತಕದೊಂದಿಗೆ (121 ರನ್) ಹಾಗೂ ಎರಡೂ ಸೂಪರ್ ಮುಖಾಮುಖಿಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್ಮ್ಯಾನ್ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಸೂಪರ್ ಓವರ್ನ ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ 2 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ನಾನ್ಸ್ಟ್ರೈಕ್ನಲ್ಲಿದ್ದ ರೋಹಿತ್ ದಿಢೀರ್ ನಿವೃತ್ತಿಗೊಂಡು ಮೈದಾನದಿಂದ ಹೊರನಡೆದರು. ಅವರ ಬದಲಿಗೆ ರಿಂಕು ಸಿಂಗ್ ಕ್ರೀಸ್ಗೆ ಆಗಮಿಸಿದರು. ಬಳಿಕ ಸ್ಟ್ರೈಕ್ನಲ್ಲಿದ್ದ ಜೈಸ್ವಾಲ್ ಒಂದು ರನ್ ಮಾತ್ರ ಗಳಿಸಿದ್ದರಿಂದ (16- 16 ರನ್) ಪಂದ್ಯ ಮತ್ತೆ ಟೈ ಆಯಿತು. ಆದರೆ, ನಂತರದ ಎರಡನೇ ಸೂಪರ್ ಓವರ್ಗೂ ಕೂಡ ರೋಹಿತ್, ರಿಂಕು ಜೊತೆಗೂಡಿ ಮತ್ತೆ ಬ್ಯಾಟಿಂಗ್ಗೆ ಮರಳಿದರು. ಈ ನಡೆಯು ಆಟದ ನಿಯಮ ಮತ್ತು ನಿಬಂಧನೆಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.
ನಿಯಮ ಹೇಳುವುದೇನು?: ಐಸಿಸಿ ನಿಯಮಗಳ ಪ್ರಕಾರ ಪುರುಷರ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 'ಮೊದಲ ಸೂಪರ್ ಓವರ್‌ನಲ್ಲಿ ಆಡಿದ ಬ್ಯಾಟರ್ ಅಜೇಯರಾಗುಳಿದಿದ್ದರೆ, ಬಳಿಕ ಮತ್ತೊಂದು ಸೂಪರ್ ಓವರ್‌ನಲ್ಲಿಯೂ ಬ್ಯಾಟಿಂಗ್ ಮಾಡಲು ಅವಕಾಶವಿದೆ.' ಈ ನಿಯಮದ ಆಧಾರದಲ್ಲಿ ರೋಹಿತ್ ಒಮ್ಮೆ ನಿವೃತ್ತರಾಗಿ ತೆರಳಿದ್ದರೂ ಮತ್ತೊಮ್ಮೆ ಬ್ಯಾಟಿಂಗ್ಗೆ ಬಂದಿದ್ದರು.
ಗೆಲುವಿಗೆ ಒಂದು ಎಸೆತದಲ್ಲಿ 2 ರನ್ ಅಗತ್ಯವಿದ್ದಾಗ ರನ್ ಓಡುವಾಗ ಚುರುಕುತನದ ಹಿನ್ನೆಲೆಯಲ್ಲಿ ರಿಂಕು ಸಿಂಗ್ರನ್ನು ಕರೆತರಲಾಗಿತ್ತು ಎನ್ನಲಾಗಿದೆ. ಆದರೆ, ರೋಹಿತ್ 'ರಿಟೈರ್ಡ್ ಔಟ್' ಆದ್ರಾ ಅಥವಾ 'ರಿಟೈರ್ಡ್ ನಾಟೌಟ್' ಆಗಿದ್ರಾ ಎಂಬುದು ನೋಡುಗರು ಸೇರಿ ಎಲ್ಲರ ಗೊಂದಲಕ್ಕೆ ಕಾರಣವಾಯಿತು.
ಅಲ್ಲದೆ, ಐಸಿಸಿ ಷರತ್ತು 25.4.2 ಪ್ರಕಾರ, 'ಅನಾರೋಗ್ಯ, ಗಾಯ ಅಥವಾ ಇತರ ಯಾವುದೇ ಅನಿವಾರ್ಯ ಕಾರಣದಿಂದ ಬ್ಯಾಟರ್ ಮೈದಾನದಿಂದ ನಿವೃತ್ತರಾಗಿದ್ದರೆ, ಆತ ಮತ್ತೆ ಆಟ ಪುನಾರಂಭಿಸಲು ಅರ್ಹನಾಗಿರುತ್ತಾನೆ. ಇದನ್ನು ರಿಟೈರ್ಡ್ ನಾಟೌಟ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಷರತ್ತು 25.4.2ರಲ್ಲಿ ಉಲ್ಲೇಖಿತ ಕಾರಣಗಳನ್ನು ಹೊರತಾಗಿ ಯಾವುದೇ ಬ್ಯಾಟರ್ ನಿವೃತ್ತರಾದರೆ, ಆತ ಮರಳಿ ಆಡಬೇಕಾದರೆ ಎದುರಾಳಿ ನಾಯಕನ ಒಪ್ಪಿಗೆ ಅಗತ್ಯವಾಗಿದೆ'.
ಮೇಲಿನ ಎರಡು ಷರತ್ತುಗಳನ್ನು ಆಧರಿಸಿ, ಎದುರಾಳಿ ನಾಯಕ ಇಬ್ರಾಹಿಂ ಜದ್ರಾನ್ ಒಪ್ಪಿಗೆಯೊಂದಿಗೆ ರೋಹಿತ್ ಮರಳಿ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಪಂದ್ಯದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನದ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಹೇಳಿಕೆಯು ಡಬಲ್ ಸೂಪರ್ ಓವರ್ ವೇಳೆ ಎರಡೂ ತಂಡಗಳು ಗೊಂದಲಕ್ಕೀಡಾಗಿದ್ದನ್ನು ಎತ್ತಿ ತೋರಿಸಿತು.
ಈ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಟ್ರಾಟ್, ನನಗೆ ಅದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ ಎಂದು ಹೇಳಿದರು. "ಎರಡು ಸೂಪರ್ ಓವರ್‌ಗಳು ಎಂದಾದರೂ ನಡೆದಿವೆಯೇ? ಇದು ಹೊಸತೆಂದು ನನಗೆ ಅನಿಸುತ್ತಿದೆ. ನಾವು ಈ ಹೊಸ ನಿಯಮಗಳ ಅನುಸಾರ ಆಡಬೇಕಿದೆ. ಹೊಸ ರೂಲ್ಸ್, ಗೈಡ್ಲೈನ್ಸ್ಗಳನ್ನು ಈ ಮೂಲಕ ಪ್ರಯೋಗಿಸಿದಂತಾಗಿದೆ'' ಎಂದಿದ್ದಾರೆ.
ಮತ್ತೊಂದೆಡೆ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೂಪರ್ ಓವರ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ''ರೋಹಿತ್ ಶರ್ಮಾರನ್ನು ಮೈದಾನದಿಂದ ಹೊರಗೆ ಕರೆದಿದ್ದು 'ಅಶ್ವಿನ್' ತರಹದ ಪ್ಲಾನ್ ಆಗಿತ್ತು. ರೋಹಿತ್ ಅದ್ಭುತ ಆಟ ತೋರಿದರು'' ಎಂದು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ರೋ'ಹಿಟ್' ಶರ್ಮಾ