ಹೈದರಾಬಾದ್: ಭಾರತ ತಂಡದ ಮುಂಚೂಣಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಸತತ ವೈಫಲ್ಯ ಕಾಣುತ್ತಿದ್ದರೂ, ಅವರ ಆಟವನ್ನು ನಾಯಕ ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಟಿ-20 ವಿಶ್ವಕಪ್ ವೇಳೆಗೆ ಅವರು ಫಾರ್ಮ್ಗೆ ಮರಳುತ್ತಾರೆ ಎಂಬ ವಿಶ್ವಾಸವನ್ನು ರೋಹಿತ್ ವ್ಯಕ್ತಪಡಿಸಿದ್ದಾರೆ.
ಡೆತ್ಓವರ್ ಸ್ಪೆಷಲಿಸ್ಟ್ ಭುವಿಗೆ ಡೆತ್ಓವರೇ ಮಾರಕ: ಡೆತ್ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲ್ ಮಾಡಿದರೆ ಎದುರಾಳಿ ತಂಡ ಸಣ್ಣಗೆ ನಡುಗುತ್ತಿತ್ತು. ರನ್ ಗಳಿಸಲು ಪರದಾಡಬೇಕಿತ್ತು. ಆದರೆ, ಏಷ್ಯಾಕಪ್ ವೇಳೆಯಿಂದ ಭುವನೇಶ್ವರ್ ಕುಮಾರ್ ಬೌಲಿಂಗ್ ಮೊನಚು ಕಳೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಭುವಿ 19ಕ್ಕೂ ಅಧಿಕ ರನ್ ಚಚ್ಚಿಸಿಕೊಂಡು ಪಂದ್ಯ ಸೋಲಿಗೆ ಕಾರಣವಾಗಿದ್ದರು.
ಅದಾದ ಬಳಿಕ ಆಸೀಸ್ ಸರಣಿಯಲ್ಲೂ ಭುವನೇಶ್ವರ್ 12 ರ ಎಕಾನಮಿಯನ್ನು ಬೌಲಿಂಗ್ ಮಾಡಿ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಇದು ತಂಡದ ಮೇಲೆ ಭಾರಿ ಹೊರೆ ಬೀಳುತ್ತಿದ್ದು, ಸೋಲಿಗೂ ಕಾರಣವಾಗುತ್ತಿದೆ.
ಭುವಿ ದಾರಿಯಲ್ಲಿ ಹರ್ಷಲ್ ಪಟೇಲ್: ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಹರ್ಷಲ್ ಪಟೇಲ್ ಕೂಡ ಭುವನೇಶ್ವರ್ ಹಾದಿಯಲ್ಲಿದ್ದಾರೆ. ಆಸೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಹರ್ಷಲ್ 8 ಓವರ್ ಬೌಲಿಂಗ್ ಮಾಡಿದ್ದು 99 ರನ್ಗಳನ್ನು ಚಚ್ಚಿಸಿಕೊಂಡು ದುಬಾರಿಯಾಗಿದ್ದಾರೆ. ಅಲ್ಲದೇ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ವಿಶ್ವಾಸ ಕಳೆದುಕೊಳ್ಳದ ನಾಯಕ: ಇನ್ನು ಇಬ್ಬರು ಮುಂಚೂಣಿ ದಾಳಿಕೋರರ ಬೌಲಿಂಗ್ ಮೊನಚು ಕಳೆದುಕೊಂಡಿದ್ದರೂ, ನಾಯಕ ರೋಹಿತ್ ಶರ್ಮಾ ಮಾತ್ರ ಅವರ ಮೇಲೆ ವಿಶ್ವಾಸ ಕಳೆದುಕೊಂಡಿಲ್ಲ. "ಭುವಿ ಮತ್ತು ಹರ್ಷಲ್ ಪಟೇಲ್ಗೆ ಸಮಯ ಬೇಕಿದೆ. ಅವರ ಕಳಪೆ ಫಾರ್ಮ್ ಹೆಚ್ಚು ಕಾಲ ಹೀಗೆಯೇ ಉಳಿಯುವುದಿಲ್ಲ. ಅವರ ಆಟ ಏನೆಂಬುದನ್ನು ನಾವು ಹಿಂದೆ ನೋಡಿದ್ದೇವೆ" ಎಂದು ಹೇಳಿದ್ದಾರೆ.
ಭುವನೇಶ್ವರ್ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದಾರಾ ಎಂಬ ಪ್ರಶ್ನೆಗೆ, ಆತನಲ್ಲಿ ಯಾವುದೇ ಆತ್ಮವಿಶ್ವಾಸದ ಕೊರತೆ ಇಲ್ಲ. ಆತನ ಕೌಶಲ್ಯಗಳ ಮೇಲೆ ನಾವು ನಂಬಿಕೆ ಇಡಬೇಕು. ಪಂದ್ಯದಲ್ಲಿ ಡೆತ್ ಓವರ್ ವೇಳೆ ಏನು ಬೇಕಾದರೂ ಆಗಬಹುದು. ಆಟಗಾರನೊಬ್ಬನನ್ನು ಟೀಕಿಸಲು ಸಾಧ್ಯವಿಲ್ಲ. ಇದಕ್ಕಾಗಿ ಬೌಲಿಂಗಹ್ ಆಯ್ಕೆಯನ್ನು ಹೊಂದಿಸಬೇಕಿದೆ ಎಂದು ಹೇಳಿದರು.
ಹರ್ಷಲ್ ಪಟೇಲ್ ಕೂಡ ಗಾಯಗೊಂಡು ಸುಮಾರು 2 ತಿಂಗಳು ಕ್ರಿಕೆಟ್ನಿಂದ ದೂರವಿದ್ದರು. ಆಸೀಸ್ ವಿರುದ್ಧದ ಮೂರು ಪಂದ್ಯಗಳಿಂದ ಅವರ ಆಟವನ್ನು ನಿರ್ಣಯಿಸಬಾರದು. ಗಾಯದಿಂದ ಮರಳಿ ಕ್ರಿಕೆಟ್ ಆಡುವುದು ಸುಲಭವಲ್ಲ. ಅವರೂ ಕೂಡ ಬೇಗನೆ ಫಾರ್ಮ್ಗೆ ಮರಳುತ್ತಾರೆ ಎಂದು ಬೆಂಬಲ ನೀಡಿದರು.
ಓದಿ: ಕಿಂಗ್ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ.. ಕೋಚ್ ದ್ರಾವಿಡ್ ಹಿಂದಿಕ್ಕಿದ ವಿರಾಟ್