ಮುಂಬೈ (ಮಹಾರಾಷ್ಟ್ರ): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸಾರಥ್ಯವು ಭಾರತದ ಮಾಜಿ ಕ್ರಿಕೆಟಿಗ, ಕನ್ನಡಿಗ ರೋಜರ್ ಬಿನ್ನಿ ಅವರಿಗೆ ಸಿಗುವ ಸಾಧ್ಯತೆ ಇದೆ. ಮುಂದಿನ ಬಿಸಿಸಿಐ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ರೋಜರ್ ಬಿನ್ನಿ ಮುಂಚೂಣಿಯಲ್ಲಿದ್ದಾರೆ.
ಬಿಸಿಸಿಐನ ಹಾಲಿ ಅಧ್ಯಕ್ಷರಾದ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಗಂಗೂಲಿ ಸ್ಥಾನಕ್ಕೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ, ಮಾಜಿ ವೇಗಿ ರೋಜರ್ ಬಿನ್ನಿ ಹೆಸರು ಪ್ರಮುಖವಾಗಿಯೇ ಕೇಳಿ ಬರುತ್ತಿದೆ. ಇತ್ತ, ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ.
ರೋಜರ್ ಬಿನ್ನಿ ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈಗ ಅಕ್ಟೋಬರ್ 18ರಂದು ನಡೆಯುವ ಚುನಾವಣೆಗೆ ಬಿಸಿಸಿಐನ ಕರಡು ಮತದಾರರ ಪಟ್ಟಿಯಲ್ಲಿ ರೋಜರ್ ಬಿನ್ನಿ ಹೆಸರು ಕಾಣಿಸಿಕೊಂಡಿದೆ. ಅಲ್ಲದೇ, ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಗೆ ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಪ್ರತಿನಿಧಿಯಾಗಿ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಬದಲಿಗೆ ರೋಜರ್ ಬಿನ್ನಿ ಹೆಸರು ಸೂಚಿಸಲಾಗಿದೆ. ಇವೆಲ್ಲವೂ ಮಾಜಿ ಸೀಮರ್ ಬಿಸಿಸಿಐ ಅಧ್ಯಕ್ಷ ಹುದ್ದೆಯ ಮುಂಚೂಣಿಯಲ್ಲಿದ್ದಾರೆ ಎಂಬುವುದಕ್ಕೆ ಪುಷ್ಟಿ ನೀಡಿದೆ.
ಬಿಸಿಸಿಐ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿ ವಿವಿಧ ಹುದ್ದೆಗಳಿಗೆ ಅಕ್ಟೋಬರ್ 18ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 11 ಮತ್ತು 12ರಂದು ನಾಮಪತ್ರಗಳನ್ನು ಭರ್ತಿ ಮಾಡಲು ಅವಕಾಶ ಇದೆ. ಅಕ್ಟೋಬರ್ 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಅಕ್ಟೋಬರ್ 14ರೊಳಗೆ ಹಿಂಪಡೆಯಬಹುದಾಗಿದೆ.
ಇದನ್ನೂ ಓದಿ: BCCI AGM: ಚರ್ಚೆಗೆ ಕಾರಣವಾದ ವಂಶಪಾರಂಪರ್ಯ ಮುಂದುವರಿಕೆ